Thursday, April 18, 2013

ಸೂರ್ಯನ ಶಾಪ



            ಬೆಳಿಗ್ಗೆ 5 ಘಂಟೆ, ಕಲಿಯು ಕಲಿಗಾಲವನ್ನು ಆವರಿಸಿದಾ ಹಾಗೆ, ಕತ್ತಲೆಯು ರಾರಾಜಿಸುತಿತ್ತು, ಬಳ್ಳಿಯು ಮರಕ್ಕೆ ಆವರಿಸಿದಾ ಹಾಗೆ ನನ್ನ ದೇಹ ಹಾಸಿಗೆಗೆ ಅನಾವರಣಗೊಳಿಸಿತ್ತು, ನಿದ್ರಾ ದೇವತೆಗೆ ಸಂಪೂರ್ಣ ವಶವಾಗಿ ಇ ಲೋಕವೆ ನನ್ನದಲ್ಲಾ ಅನ್ನುವ ಹಾಗೆ ಬಿದ್ದುಕೊಂಡಿದ್ದೆ, ಯಾವುದೋ ಮೂಲೆಯಿಂದ ಒಂದು ದ್ವನಿ ನಿದ್ರಾ ದೇವತೆಯ ಭದ್ರ ಕೋಟೆಯನ್ನು ಭೇದಿಸುತಿತ್ತು, ಕೊನೆಗೆ ನಿದ್ರಾ ದೇವತೆ ಸೋತು ಮಾಯವಾದಳು, "ಏದ್ದೇಳು... ಏದ್ದೇಳು ಮಂಜುನಾಥಾ, ಏಳು.. ಬೆಳಗಾಯಿತು", ಏನ್ ಮಾಡುದು ಹೇಳ್ರಿ, ಇ ಜನಾ ಲೋಕವನ್ನೆ ಕಾಯುವ ಆ ಮಂಜುನಾಥನಿಗೆ ಹಾಯಾಗಿ ಮಲಗಲು ಬಿಡೊಲ್ಲಾ, ಇನ್ನು ನಮ್ಮ ನಿಮ್ಮಂತಾ ಹುಳುಮಾನವನಿಗೆ ಬಿಡ್ತಾರಾ, ಆ ಧ್ವನಿ ನಮ್ಮ ಊರಿನಾ ಗಣಪತಿ ಗುಡಿಯಿಂದ ಬರ್ತಾ ಇತ್ತು, ಈ ಗುಡಿಗಳಲ್ಲಿ ಘಂಟೆಗಳನ್ನಾ ಯಾಕೆ ಇಡ್ತಾರೊ ಅನ್ನೊ ಪ್ರಶ್ನೆ ನನ್ನ ಮನದಲ್ಲಿ ಇನ್ನೂ ಮರಿಚಿಕೆಯಾಗಿದೆ, ಕೆಲವರು ಹೇಳ್ತಾರೆ ದೇವರ್ನಾ ಎಚ್ಚರ ಮಾಡ್ಲಿಕ್ಕೇ ಅಂತಾ, ಆ ದೇವರು ಆ ಘಂಟೆ ನಾದದಿಂದಾ ಎಚ್ಚರವಾಗ್ತಾರೋ ಇಲ್ಲಾ ಗೊತ್ತಿಲ್ಲಾ, ಈ ಮಾನವರು ಮಾತ್ರ ದೇವರ ಸನ್ನೀದಿಯಲ್ಲಿ ಇದ್ದೇವೆ ಅಂತಾ ಎಚ್ಚರವಾಗ್ತಾರೆ, ಹಾಗೂ ಹೀಗು ತಲೆದಿಂಬನ್ನು ಕಿವಿಗೆ ಒತ್ತಿ ಹಿಡಿದು, ಮನದಲ್ಲಿ ಗುಡಿಗುಂಡಾರಗಳನ್ನಾ ಶಪಿಸುತ್ತಾ, ನಿದ್ರಾ ದೇವತೆಯನ್ನು ವಲಿಸುವ ಪ್ರಯತ್ನದಲ್ಲಿ ಸಾಗುತ್ತಿದ್ದೆ, ಆಗ ತಾನೆ ಅರಳಿದ ಹೂವು ಬಾಡಿದಂತೆ ನನ್ನ ಪ್ರಯತ್ನಗಳಿಗೆ ವಿಘ್ನ ಬಂತು, ನನ್ನ ಹಿಂದಿನ ಜನ್ಮದಾ ಶತ್ರು ತನ್ನ ಸೇಡಿನಾ ಕಿಡಿಗಳನ್ನಾ ನೊಂದಿಸಿಕೊಳ್ಳಲು ಪೈಪೊಟಿ ನಡೆಸುತ್ತಿದ್ದಾ, ಅದು ಯಾರು ಅಂತಿರಾ, ಬೇರೆ ಯಾರೂ ಅಲ್ಲಾ ನನ್ನ ತಾತ, ಶತ್ರುಗಳ ಮೇಲೆ ಹೊಳಪಾದ ಕತ್ತಿಯಿಂದಾ ಇರಿಯುವ ಹಾಗೆ ನನ್ನ ಮೇಲೆ ತಮ್ಮ ಕೊಲಿನಿಂದಾ ಪ್ರಹಾರ ಮಾಡುತ್ತಿದ್ದರು, ಅದು ಅವರ ಪ್ರೀತಿಯ ಸವರಿಕೆ ಆದರು ನನಗೆ ನಿದ್ದೆಯ ಅಮಲಿನಲ್ಲಿ ಪ್ರಹಾರದಾ ಪ್ರತಿಕಾರ ಅನ್ನಿಸುತಿತ್ತು,
"ಬೆಳಕಾಯ್ತೀ ಎಳೋ ಇನ್ನಾ, ಸೂರ್ಯದೇವ ರಥಾ ಹತ್ತಿ, ಹೋಗಾಕ ನಿಂತಾನ್, ಎಳ್ ಬೇಗ ಇನ್ನ" ಅಂತಾ ನಮ್ಮ ಶತ್ರು ಸಾರಥಿ ಚಾಟಿ ಬೀಸಿದಾ,
"ಆಯ್ತು ಎಜ್ಜಾ,... ನೀ ಗುಡಿಗೆ ಹೋಗಿ ಬಾ, ನಾ ಎದ್ದ ಜಳಕಾ(ಸ್ನಾನ) ಮಾಡಿ ಬರತೇನಿ", ಕಷ್ಟವಿದ್ದರು ಸಹಿಸುವಾ ದೇವರಂತೆ ಹೇಳಿದೆ, ಮತ್ತೆ ಅವರು ತಮ್ಮ ದೈನಂದಿನ ವ್ಯಾಕ್ಯಾನುಗಳನ್ನಾ ಪ್ರಾರಂಭಿಸಿದರು, "ದಿನಾ ಆ ಸೂರ್ಯದೇವ ತನ್ನ ಕೆಲಸಾ ಮಾಡುಕಿಂತ ಮೊದಲ ಎದ್ದ್ ಜಳಕಾ ಮಾಡಿ ಸೂರ್ಯ ನಮಸ್ಕಾರ್ ಮಾಡಬೇಕ್, ಇಲ್ಲಾ ಅಂದ್ರ್ ಅವನ ಶಾಪ ಹತ್ತಿ, ಆ ದಿನದ ತೂಂಬ ಧರಿದ್ರತನಾ ಹತ್ತಕೋತೇತಿ, ಆ ಶನಿದೇವರ್ ಆ ಸೂರ್ಯನ ಮಗಾ, ಅವನ ಅಪ್ಪನ ಮಾತ ಕೇಳಲಿಲ್ಲಾ ಅಂದ್ರ ಬಂದ ಒಕ್ಕರಿಸಿಕೊಂಡ ಬಿಡತಾನ್ ನೋಡು, ಜಲ್ದಿ ಏಳ್, ಇನ್ನ್...." ಅಂತಾ ಹೇಳಿ ತಾತ ಹೊರಟುಹೋದರು,
ಪಾಪ ಆ ಸೂರ್ಯನಿಗು ಬೆಳಿಗ್ಗೆ ಏಳುವದೆಂದರೆ ಎಷ್ಟು ಕಷ್ಟಾ ನೊಡಿ, ತನ್ನ ಮುಖವನ್ನು ಕೆಂಡಾಮಂಡಲ ಮಾಡಿಕೊಂಡು, ಕಾಳ್ಗಿಚ್ಚಲ್ಲಿ ಕರಗಿದಾ ಕಬ್ಬಿಣದ ಬಣ್ಣ ಹಚ್ಚಿಕೊಂಡು ಉದಯಿಸುತ್ತಾನೆ,
ಆ ಸೂರ್ಯನ ಸ್ಥಿತಿ ನೆನೆದು ಪಾಪ ಅನಿಸಿತು,
ಆದರೆ ಅವನ ಶಾಪವ ಕೇಳಿ ತಾಪವಾಯಿತು,
ಇದನ್ನು ನನ್ನ ಶತ್ರುವಿಗೆ ಹೇಳಿದ ವ್ಯಕ್ತಿ ಮೇಲೆ ಕೋಪ ಬಂದಿತು,
ಇದುವೆ ಜಗದ ನಿಯಮವೆಂದು ತಿಳಿದು ಶಾಂತಿ ಆವರಿಸಿತು.
ದೇವರಾದ ಆ ಸೂರ್ಯನಿಗೂ ಇ ಬೆಳಿಗ್ಗೆ ಏಳುವ ಕಷ್ಟ ಪಕ್ಕಾ, ಇನ್ನು ನಾನು ಯಾವ ಲೆಕ್ಕಾ, ಅಂತಾ ಒಲವಿಲ್ಲದಾ ಮನಸ್ಸಿನಿಂದಾ ಹಾಸಿಗೆಯ ಜೊತೆ ವಿರಹಿಯಾಗಬೇಕೆನ್ನುವಷ್ಟರಲ್ಲಿ, ಅರೆನಿದ್ರೆಯಲ್ಲಿ ಒಮ್ಮೆ ಕಣ್ಣರಳಿಸಿ ನೋಡಿದೆ, ತಾತ ಇನ್ನು ದೇವಸ್ತಾನದಿಂದ ಬಂದಿರಲಿಲ್ಲಾ, ಹಾಗೆ ಇನ್ನೊಂದು ಜೊಂಪು ನಿದ್ದೆ ಹೋದೆ, ಅದು ಕಣ್ಣಾ ಮುಚ್ಚಾಲೆ ಆಡೋ ನಿದ್ದೆ ಆಗಿತ್ತು, ತಾತ ಬಂದ ತಕ್ಷಣ ಸೂರ್ಯೋದಯವಾಗಿಬಿಟ್ಟಿತ್ತು, ಅವರನ್ನಾ ನೋಡಿ ಆಟದಲ್ಲಿ ಔಟ್ ಆಗಿಬಿಟ್ಟೆ, ಅದಕ್ಕೆ ನಾನು ಅವನ್ನಾ ನನ್ನ ಶತ್ರು ಅಂತಾ ಕರೆಯೋದು, ಮುಂಜಾನೆಯ ಕಾರ್ಯಕ್ರಮಗಳಿಗೆಲ್ಲಾ ಪೂರ್ಣ ವಿರಾಮ ಕೊಟ್ಟು, ಗಂಗೆಯಿಂದಾ ದೇಹ ಪಾವನಿಸಿಕೊಂಡು, ಶಾಂತ ಮೂರ್ತಿ ಬಸವಣ್ಣನ ಹಾಗೇ ವಿಭೂತಿಯನ್ನು ಹಣೆಗೆ ಝೇಂಕರಿಸುತಾ ನನ್ನ ತಾತನ ಪಾದಪದ್ಮಂಗಳಿಗೆ ಪ್ರಣಾಮವೆಸಗಿದೆ, ತಾತ ಮುಗಳ್ನಕ್ಕು "ಇವತ್ತ ಅಮವಾಸ್ಸಿ, ನಮ್ಮ ಮನಿದ್ಯಾವ್ರ ಯಲ್ಲಮ್ಮಗ ಹೋಗಿ ಪೂಜಾ ಮಾಡಿಸಿಕೊಂಡು ಬಾ" ಅನ್ನೊ ರಾಜಾಜ್ಞೆ ಹೊರಡಿತು,
"ಮನ್ಯಾಗ ಬ್ಯಾರೇ ಯಾರೂ ಇಲ್ಲಾ? ನಾನ್.. ಹೊಗ್ಬೇಕನ್..." ಅಂತಾ ಅರೆಬರೆ ಕೋಪದಿಂದಾ ಹೇಳಿದೆ.
"ಹೇಳಿದ್ದ ಮಾಡೋ... ಎನರ ಕೆಲಸಾ ಹೇಳಿದ್ರ, ಬರಿ ಅಡ್ಡ ಗೆರಿ ಎಳ್ಯುದು ಆಯ್ತ ನಿಂದ್"
"ಆಯ್ತು, ಹೋಕ್ಕೇನಿ" ಅಂತಾ, ಕಾಲುಗಳಿಗೆ ರಕ್ಷಣೆ(ಚಪ್ಪಲಿ ಹಾಕಿ) ಕೊಟ್ಟು, ಕಾಲಿಗೆ ಬುದ್ದಿ ಹೆಳಿದೆ.

....................................................................................................................

ನಾನು ಹೊಗುವಾ ಪುರದ ಹೆಸರು ಯಲ್ಲಮ್ಮನಾ ಗುಡ್ಡ, ತಾಯಿ ಎಲ್ಲಮ್ಮನವರ ವಾಸಸ್ಥಳ ಮತ್ತು ಪುಣ್ಯಸ್ಥಳ, ನಮ್ಮ ಊರಿನಿಂದಾ ಸೂಮಾರು 40 ಕಿ.ಮೀ. ಅಂಕುಡೊಂಕಿನಾ ದಾರಿ ಬಿಗುಮಾನವಿಲ್ಲದೇ ಚಾಚಿ ನಿಂತಿದೆ, ಮನೆಯಿಂದಾ ಬಸ್ಸನಿಲ್ದಾಣಕ್ಕೆ ಹೋಗಿ, ನನ್ನ ಶತ್ರುವನ್ನು ಮನದಲ್ಲಿ ಶಪಿಸುತ್ತಾ, ಯಲ್ಲಮ್ಮನ ಗುಡ್ಡಕ್ಕೆ ಹೋಗುವ ಬಸ್ಸಿಗಾಗಿ ಕಾಯುತ್ತಿದ್ದೆ, ಸಮಯವು ಯಾವ ನಿರ್ಭಂದನೆ ಇಲ್ಲದೇ ಉರುಳುತಿತ್ತು, ಇತ್ತ ಪ್ರಯಾಣಿಕರ ಮುಖ ಕಮಲಗಳಿಗೆ ಕೈವಸ್ತ್ರ ಕೆಲಸ ಕೊಟ್ಟಿತ್ತು. ಅಷ್ಟರಲ್ಲಿ ಮಹಾರಾಜರು ಆಸ್ಥಾನಕ್ಕೆ ಅಲಂಕರಿಸುವಾ ಹಾಗೆ ಬಸ್ಸು ಬಸ್ಸನಿಲ್ದಾಣದಲ್ಲಿ ತನ್ನ ಸ್ಥಾನ ಅಲಂಕರಿಸಿತು, ಪ್ರಯಾಣಿಕರು ಬಸ್ಸ ಮಹಾರಾಜರಿಗೆ ಎದ್ದು ಗೌರವಿಸಿದರು, ಇನ್ನೇನು ಅಬ್ಬಾ ಅನ್ನುವಷ್ಟರಲ್ಲಿ, ಬಸ್ಸಿಗೇ ಎಷ್ಟು ಬಾಗಿಲುಗಳು ಇದಾವೆ ಅಂತಾ ತಿಳಿತಾ ಇಲ್ಲಾ, ನಾನು ಸಕ್ಕರೆ ಕಾಣದಾ ಇರುವೆಯಂತೆ ದಾರಿಗಳು ನೂರಾದರು ಗುರಿ ಒಂದೇ ಎಂದುಕೊಂಡು, ಒಳಗೆ ನುಗ್ಗುವ ಪ್ರಯಾಣಿಕರ ಜೊತೆ ಲಾಲಿ ಹಾಡಿದೆ. ಕೊನೆಗು ಕುರುಕ್ಷೇತ್ರ ಯುದ್ದ ಒಂದೇ ದಿನದಲ್ಲಿ ಜಯಗಳಿಸಿ ಧರ್ಮರಾಜನು ಆಸೀನರಾದಂತೆ ಕುಳಿತೆ. ಸೂರ್ಯ ತಲೇ ಮೆಲೆ ಬಂದು ತಕ್ಕ ಥೈ ಅಂತಾ ನೃತ್ಯ ಮಾಡುತ್ತಿದ್ದ, ಅವನ ರೇಖೆಗಳು ತಮ್ಮ ಹರಿತವಾದ ಖಡ್ಗದಿಂದ ಯದ್ದ ಸಾರಿದ್ದವು, ಭಗವಾನ್ ಶ್ರೀ ವಿಷ್ಣು ಆಗಿನ ಕಾಲದಲ್ಲಿ ಮೂರು ಅಡಿ ಜಾಗ ಕೇಳಿದ್ದಾ ಅನ್ನೋ ನೆನಪು, ಅದೆ ಈಗ ಅವನಿಗೆ ಬಸ್ಸನಲ್ಲಿ ಒಂದು ಅಡಿ ಜಾಗವು ಸಿಗುತ್ತಿತ್ತೋ ಇಲ್ಲವೊ ಅಂತಾ ಮನದಲ್ಲೆ ನಕ್ಕೆ, ವಾಹನ ಚಾಲಕ ವಿಳ್ಯದ ಎಲೆ ಮತ್ತು ಅಡಿಕೆಯನ್ನು ಅಗಿಯುತ್ತಾ, ಎಲೆಯ ರಕ್ತವನ್ನು ಬಾಯಿಂದಾ ಹೊರಗಡೆ ಹಾಕುತ್ತಾ ವಾಹನ ಏರಿದಾ, ವಾಹನವು ತನ್ನ ಕಾರ್ಯವನ್ನು ಪ್ರಾರಂಭಿಸಿತು.
ಅರೆ ಬೆಂದ ಗಾಳಿ ಕಿಟಕಿಯ ಮುಖಾಂತರ ವಾಹನವನ್ನು ಆಕ್ರಮಿಸಿತು, ಆಗ ಸ್ವಲ್ಪ ನಿಟ್ಟುಸಿರು ಬಿಟ್ಟೆ. ಮನೆಗೆ ಹಸಿರು ತೋರಣದಂತೆ ದಾರಿಗಳಿಗೆ ಹಸಿರು ಮರಗಳಾ ತೋರಣ ವಿಜ್ರಂಭಿಸುತಿತ್ತು, ಹಾಗೆ ಹಸಿರಿನ ಪ್ರತಿಬಿಂಬಗಳಾ ಮೆಲುಕು ಹಾಕುತ್ತಾ ವಾಹನದ ಕನ್ನಡಿ ವಾಹನದ ಜೊತೆಯಾಗಿ ಸಾಗುತಿತ್ತು, ಅಷ್ಟರಲ್ಲಿ ಯಾವುದೋ ದು:ಖವನ್ನು ನೊಂದಾಯಿಸುವಾ ರಾಗ ಕಿವಿಗೆ ಕೇಳಿಸಿತು, ಯಾರದು ಇ ರಾಗ ಅಂತಾ ಮುಖವನ್ನು ಸ್ವಲ್ಪಾ ತಿರುಗಿಸಿ ನೊಡಿದೆ, ಹೆಂಗಳೆಯರಾ ದಿಬ್ಬಣದಲ್ಲಿ ಕಳ್ಳ ಕೃಷ್ಣನ ವಿನೋದದಂತೆ, ಒಂದು ಪುಟ್ಟ ಪಾಪು ರಾಗ ಹಾಡ್ತಾ ಇದ್ದಾ, ಇವನಾ ತಾಯಿ ಅವನನ್ನಾ ಸಮಾದಾನ ಮಾಡಲು ಛಲಬಿಡದ ವಿಕ್ರಮಾದಿತ್ಯನ ಹಾಗೆ ಸತತ ಪ್ರಯತ್ನದಲ್ಲಿ ಮುಳುಗಿದ್ದಳು. ಆದರೆ ಪಾಪ, ಪಾಪುವಿನಾ ತಾಯಿಗೆ ಕುಳಿತುಕೊಳ್ಳಲು ಆಸನಗಳು ಇರಲಿಲ್ಲಾ, ಒಂದು ಕೈನಲ್ಲಿ ಪಾಪು, ಇನ್ನೊಂದು ಕೈನಲಿ ಕಬ್ಬಿಣ ಸಲಾಕೆಯ ಆಸರೆ ಇತ್ತು, ಇ ದೃಶ್ಯ ನೋಡಿ ಮನವು ಕರಗಿ ನನ್ನ ಆಸನವನ್ನು ದಾನ ಮಾಡಬೇಕೆಂಬ ಹವಣಿಕೆ ಹುಟ್ಟಿತು, ಆದರೆ ಆ ಹೆಂಗಳೆಯರ ದಿಬ್ಬಣ ಅಂಕು ಡೊಂಕು ದಾರಿಗಳಿಗೆ ಮಾಡುವಾ ನರ್ತನ ನೊಡಿ, ಪರರ ಚಿಂತೆ ನಮಗೆಕಯ್ಯಾ ಎಂದು ನೆನಪಾಗಿ ಸುಮ್ಮನೆ ಕುಳಿತುಕೊಂಡೆ. ಮತ್ತೆ ಆ ಕಳ್ಳ ಕೃಷ್ಣನ ನೋಡಿ ಮನವು ಕೇಳಲಿಲ್ಲಾ, ಮನದಲ್ಲೆ ಶಕುನಿಯ ಲೆಕ್ಕಾಚಾರಗಳಂತೆ ಏಟು ಬಿದ್ದಿರಬೆಕು ಬೆತ್ತ ಮುರದಿರಬಾರದು ಅನ್ನೊ ಗುಸುಪಿಸು ನಡೆಯುತ್ತಿತ್ತು, ಕೊನೆಗೆ ಒಂದು ವಿಚಾರ ವಿಜಯಿ ಯಾಗಿತು.
"ಏ ಪುಟ್ಟಾ, ನಿನ್ನ ಹೆಸರ್ ಏನ್" ಅಂತಾ ವಿಚಾರದ ವಿಕಿರಣಗಳಾ ಮೊದಲ ಅಲೆಯನ್ನಾ ಕಂಪಿಸಿದೆ, "ಅ.. ಅ... ಅಅಅ...." ಅಂತಾ ಮಗು ತನ್ನದು ಅದೇ ರಾಗ ಅದೇ ಹಾಡು ಅಂತ ಉತ್ತರ ನಿಡಿತು, ಮಗುವಿನ ತಾಯಿ ಒಂದು ಕ್ಷಣ ನನ್ನ ಕಡೆ ನೋಡಿ ಸುಮ್ಮನಾದರು, ನಾನು ಕಿರುನಗೆ ಬೀರುತ್ತಾ ಸುಮ್ಮನಾದೆ, ಕೊನೆಗೆ ಮಗುವಿನಾ ತಾಯಿ "ಅಪ್ಪಿ, ಅಂಕಲ್ ನಿನ್ನ ಹೆಸರ ಕೆಳಾಕತಾರ್, ನಿನ್ನ ಹೆಸರ ಹೆಳ್ ಅವ್ರಿಗೇ" ಅಂತಾ ಹೇಳಿದ್ರು, ಮಗು ತನಗೆ ಇಹಪರಗಳಾ ಅರಿವಿಲ್ಲದಂತೆ ತನ್ನ ರಾಗ ತಾಳವನ್ನು ಬದಲಿಸದೆ ಮುಂದುವರೆಸಿತ್ತು, ಮಗುವಿನಾ ತಾಯಿಗೆ ಎನ್ ಮಡಬೆಕು ಅಂತಾ ತಿಳಿಯದೆ "ಮಂಜು ಅಂತಾರಿ ಅವನ ಹೆಸರು" ಅಂತಾ ಹೇಳಿ ನಿಟ್ಟುಸಿರು ಬಿಟ್ಟರು, ಮಂಜುಳಾನೋ ಅಥವಾ ಮಂಜುನಾಥನೋ ಅಂತಾ ಮಗುವಿನಾ ಮುಖ ನೊಡಿದರೆ ಗುರುತು ಸಿಗಲಿಲ್ಲಾ, ಏನೇ ಇರಲಿ ಅಂತಾ "ಬಾರಮ್ಮಾ ಮಂಜುಳಾ ನನ್ನ ಹಂತೇಕ್" ಅಂತಾ ನನ್ನ ವಿಚಾರಗಳ ಆಚರಣೆಯ ಕಾರ್ಯ ಪ್ರಾರಂಭಿಸಿದೆ. ರೋಗಿ ಬಯಸಿದ್ದು ಹಾಲು ಅನ್ನಾ, ವೈದ್ಯರು ಹೇಳಿದ್ದು ಹಾಲು ಅನ್ನಾ, ಅನ್ನೋ ಹಾಗೆ, ಮಗುವಿನ ತಾಯಿ "ಮಂಜುನಾಥ, ಅಂಕಲ್ಲ ಕರಿತಿದಾರೆ ಅವರ ಹತ್ರಾ ಹೊಗು" ಅಂತಾ ಹೇಳಿದ್ರು. ಒಂದು ಕ್ಷಣ ಇಂಗು ತಿಂದಾ ಮಂಗನ ತರಾ ಆದೆ, ಳು ಆಳಿಸಿ ನಾಥ ಸೇರಿಸಿ ಜೊತೆಗೆ ಸಹಾಯ ಅನ್ನೊ ಕ್ರಿಯಾಪದ ಸೇರಿಸಿ, ಆ ಮಗುವನ್ನು ನನ್ನ ಕೈಯಿಂದಾ ಆವರಿಸಿಕೊಂಡು, ನನ್ನ ತೊಡೆಯ ಮೇಲೆ ಮಗುವಿಗೆ ಆಸನ ಒದಗಿಸಿದೆ, ಅಂದುಕೊಂಡು ಕಾರ್ಯ ಸಾಧಿಸಿ ಅರ್ಜುನ ಪಾಶುಪತಾಸ್ತ್ರ ಪಡೆದಂತೆ ನನ್ನ ಮನವು ಆಕಾಶದ ನಿರಾಳತೆಗೆ ಲಗ್ಗೆ ಹಾಕಿತು. ಮಗುವಿನ ತಾಯಿ ಕಣ್ಣಲ್ಲಿಯೇ ಕೃತಘ್ನತೇ ಹೇಳಿದರು. ಅದೇನಾಶ್ಚರ್ಯ ಮಗು ನನ್ನ ತೊಡೆಯ ಮೇಲೆ ಕೂತೊಡನೆ ತನ್ನ ರಾಗ ತಾಳಗಳನ್ನು ಬದಲಿಸಿತು "ನಗು ನಗುತಾ ನಲಿ ನಲಿ ಏನೇ ಆಗಲಿ" ಹೊಸ ರಾಗವನ್ನು ಆಲಂಗಿಸಿತು, ನನಗೆ ಆನಂದವೋ, ಆಶ್ಚರ್ಯವೋ, ಎನೋ ತಿಳಿಯಲಿಲ್ಲಾ, ಆ ಮಗುವಿಗೆ ಗಿಡ, ಮರ, ಬೆಟ್ಟ, ಗುಡ್ಡ, ನದಿ ಎಲ್ಲವು ತೋರಿಸುತ್ತಿದ್ದೆ. ಆ ಕ್ಷಣ ನನ್ನ ನಾನೇ ಮರೆತು ನಾನು ಒಂದು ಮಗುವಾಗಿದ್ದೆ, ಇಬ್ಬರು ಕೃಷ್ಣ ಬಲರಾಮರಾಗಿ ಗೋಪಿಕಾ ಸ್ತ್ರೀಯರನ್ನು ಹುಡುಕುವ ಹಂಬಲದಂತೆ, ವಾಹನದ ಕಿಡಕಿಯ ಕಡೆ ನೋಡುತ್ತಾ ಮೈಮರೆತು ಕುಳಿತೆವು. ಒಂದು ಕ್ಷಣ ಅನಿಸಿತು, ಇ ಮಗುವಿನಾ ಜೊತೆ ಯವುದೊ ಜನುಮದಾ ಋಣಾನುಬಂಧ ಇದೆ ಎನೊ ಅಂತಾ ಅನಿಸಿತು, ವಾಹನವು ಪರಿಪೂರ್ಣವಾಗಿ ಬೆಸೆದು ರಸ್ತೆಯ ಹಾಗೆ ತನ್ನನ್ನು ಬದಿಲಿಸಿತ್ತಾ ಹೊರಟಿತು.

.....................................................................................................

ವಾಹನವು ತನ್ನ ಕಾರ್ಯಕ್ಕೆ ಅಲ್ಪವಿರಾಮವಿಟ್ಟಿತು. ನಾನು ಕೃಷ್ಣಬಲರಾಮರ ಲೋಕದಲ್ಲಿ ತಲ್ಲೀನನಾಗಿದ್ದೆ, ಆವಾಗ ಒಂದು ಗಡುಸಾದ ದ್ವನಿ ನನ್ನ ಕರ್ಣದ ತಮಟೆಯನ್ನು ತಲ್ಲಣಗೊಳಿಸಿತು, "ನೀವ್ ಎಲ್ಲಿಗ್ ಹೋಗಬೇಕ್ರಿ? ಇದಾ ಲಾಸ್ಟ್ ಸ್ಟಾಪ್, ಯಲ್ಲಮ್ಮನಗುಡ್ಡ ಇದಾ" ಅಂತಾ ವಾಹನ ನಿರ್ವಾಹಕ ಕೊಪದಿಂದಾ ಹೆಳಿದಾ, ನಾನು ಆವಾಗ ಭುಲೋಕಕ್ಕೆ ಬಂದೆ,
"ಇದರಿ!! ಯಲ್ಲಮ್ಮನಗುಡ್ಡ!! ಎಷ್ಟ ಜಲ್ದಿ ಬಂತಲಾ...",
"ಹು.. ಇದ... ಜಲ್ದಿ ಬರ್ರಿ, ಎಲ್ಲಿಂದ ಬರ್ತಾರೋ ಎನೋ, ಇಗಿನ ಹುಡಗೋರ್ಗಿ, ನಡದಾಗ ಚೊನ್ನ ನಿಲ್ಲುಲ್ಲಾ, ತಲ್ಯಾಂದ ಎಳಗಾಯಿ ಹಣ್ಣ ಆಗುಲ್ಲಾ..", ಅಂತಾ ನಿರ್ವಾಹಕ ಗೊಣಗಿದ, ನನಗೂ ಕೋಪ ಬಂತು. ಇ ಗೊವರ್ನಮೆಂಟ್ ನ್ಯಾಗ ಕೆಲಸಾ ಮಾಡಾವ್ರಿಗೆ ಬರಬಾರ್ದೆಲ್ಲಾ ಜಾಸ್ತಿ ಬಂದು ಬಿಡುತ್ತೆ ಅಂತಾ ಮನದಲ್ಲಿ ನಿರ್ವಾಹಕನ ಮಾನಹರಣಮಾಡುತ್ತಾ ಕಳ್ಳಕೃಷ್ಣನಾ ನೋಡಿದೆ, ಕಳ್ಳಕೃಷ್ಣ ವಿಶ್ರಾಂತಿಯ ತೊಟ್ಟಿಲಲ್ಲಿ ನಿದ್ದೆಯೆಂಬ ತೂಗುಯ್ಯಾಲೆಗೆ ಶರಣಾಗಿದ್ದಾ, ಏಳಪ್ಪಾ, ಕಳ್ಳಕೃಷ್ಣ ನಿನ್ನ ಯಶೊದೆ ಮಡಲಿಗೆ ಅಲಂಕೃತನಾಗು ಎಂದು ಒಂದು ಹಣೆಯ ಮೇಲೆ ಒಂದು ಮುತ್ತು ಕೊಟ್ಟೆ, ಎಲ್ಲ ಜನರು ವಾಹನಕ್ಕೆ ಟಾಟಾ ಹೇಳುತಿದ್ದರು(ಇಳಿಯುತ್ತಿದ್ದರು), ನಾನು ಎದ್ದುನಿಂತು ಯಶೊದೆಯ ಹುಡುಕಾಟ ನಡೆಸಿದೆ, ಬಸ್ಸನಲ್ಲಿ ಮಗುವಿನ ತಾಯಿ ಕಾಣಿಸಲೆ ಇಲ್ಲಾ, ಮಳೆ, ಸಿಡ್ಲು, ಗುಡುಗು, ಬಿಸಿಲು, ಗಾಳಿ ಎಲ್ಲವು ಒಮ್ಮೆ ಬಂದು ನನ್ನ ಹಾರ್ಟನಾ ಟಚ್ ಮಾಡಿದ ಹಾಗೆ ಆಯಿತು. ಏನ್ ಮಾಡಬೇಕೋ ತಿಳಿಲಿಲ್ಲಾ, ಕಣ್ಣಿಗೆ ನಿರ್ವಾಹಕ ಕಂಡ, ಮಗುವನ್ನು ಎತ್ತಿಕೊಂಡು ವಾಹನ ನಿರ್ವಾಹಕನ ಹತ್ತಿರ ಹೋದೆ,
"ಸಾಹೇಬ್ರ್, ಇ ಹುಡಗನ್ ಅವ್ವಾರನಾ ನೊಡಿದ್ರೀ ಏನ್, ಇಲ್ಲೆ ಹುಡಗನ್ನ ನನ್ನ ಕೈಯಾಗ ಕೊಟ್ಟ ನನ್ನ ಇಂಬಾಲಿ(ಜೊತೆಗೆ) ನಿಂತಿದ್ರು, ಇಗಾ ಸಡನ್ನಾಗಿ ಕಾಣವಲ್ರು"
"ಹಾ?... ತಮ್ಮಾ ನಿನಗೇನರ್.. ತಲಿ ಗಿಲಿ ಕೆಟ್ಟೆತಿ ಎನ್?, ಕಳ್ಳಿ ರಸ ಹಾಲ ಆಕ್ಕೆತಿ ಏನ್, ಹೆಂಗ ಮಾತಾಡಾಕತಿ ನೀ, ಯಾರರಾ ಹಡದ ಅವ್ವ ತನ್ನ ಕೂಸನಾ ಹಂಗ ಮರತ ಬಿಟ್ಟ ಹೋಗೂದು ಅಂದ್ರ ಎನ್, ಎನ್ ನಿದ್ದಿಗನ್ನಾಗ ಅದಿಯೊ ಎನ್ ಕನಸ ಕಾಣಾಕತಿಯನೊ" ಅಂತಾ ನಿರ್ವಾಹಕಾ ನನ್ನೆ ಅಪರಾದಿ ಸ್ಥಾನದಲ್ಲಿ ನಿಲ್ಲಿಸಿದಾ, ಇದನ್ನು ಕೇಳಿದ ತಕ್ಷಣ ಸ್ಥಂಬಿಭೂತನಾದೆ. ಏನ್ ಮಾಡಬೇಕು ತಿಳಿಯಲಿಲ್ಲಾ, ಯಾಕಂದ್ರೆ ನಿರ್ವಾಹಕ ಹೇಳುವ ಮಾತಲ್ಲು ಹುಳುಕಿಲ್ಲಾ, ರಿ ಗಂಗಾಜಲಾ ಬಿಡಬೆಕಂತಾ ಆಸೆಯಾದ್ರೆ ಯಾರ್ನಾದ್ರೂ ಕೊಲ್ಲೊಕ್ ಆಗುತ್ತಾ, ಎನೊ ಒಂದು ನನ್ನ ವಾದವನ್ನಾ ಅಟ್ಟಕ್ಕೆ ಹಚ್ಚಿದೆ.
"ರೀ.... ಮಲಗಿ ಹೂವ ಮಾರಾವ ಮಲಗಿಹೂವಿನ ಗಿಡಾ ಇಟಗೊಂಡಾಂಗ ಮಾತಾಡಕತೆರ್ಲಾ, ನನಗ ಇನ್ನು ಮದವಿನ ಆಗಿಲ್ಲ ಅಂದ್ರ ಮಗು ಹೆಂಗ ಬರತೆತಿ, ಎನೋ ಅಂತಾರ್ಲಾ ಹಡದ(ಹೆತ್ತು)ಅಕ್ಕನ್ ಕೂಸ್ ಎತಕೊಂಡ ಅಡ್ಡಾಡಿದಕ ಹಡದಾಕಿ ಅಂದ್ರಂತ್, ಪಾಪ ರಶ್ಯ್ ಇರು ಬಸ್ಸನ್ಯಾಗ ಎತಗೊಂಡ ನಿಲ್ಲಾಕ ತ್ರಾಸ್ ಅಕ್ಕೆತಿ ಅಂತ ಆಕಿ ಮಗನ್ನ ತೊಡಿಮ್ಯಾಲ ಕುಂದ್ರಿಸಿಕೊಂಡಿನಿ. ಇಗ ನೋಡಿದ್ರ ಹುಡಗನ ಅವ್ವ ಕಾಣವಾಲ್ರು, ನೀವ್ ನೊಡಿರ್ರ್ ಎಲ್ಲಾ ನನ್ನ ಮ್ಯಾಲ ಹೊರಿ(ಭಾರ) ಹೊರಸಾಕತೆರ್ರಿ",
"ಇದೊಳ್ಳಿ ಕತಿ ಆಯ್ತಲ್ರಿ, ಕಾಶಿಗಿ ಹೋದ್ರು ಕಸಾ ಹೊಡ್ಯುದು ತಪ್ಪಲಿಲ್ಲಾ ಅಂತಾ, ನಂದ ನನಗ ರಗಡ ಆಗೇತಿ, ಇನ್ನು ಎರಡ ಟ್ರಿಪ್ಪ ಹೊಗಿ ಬರಬೆಕ್, ಬೇಗಾ ನೋಡ್ರಿ, ಇಲ್ಲೆ ಎಲ್ಲಾ ಜನಾ ಇಳದ ಹೋಗಾಕತಾರು, ಹುಡಗನ ಅವ್ವಗ ಮರೀ(ಮರಿಯುವಾ) ರೋಗ ಅದು ಇರಬೇಕು, ಹುಡಕಿ ಆಕಿ ಮಗನ್ನ ಆಕಿಗಿ ಕೊಡ್ರಿ, ಜಲ್ದಿ ನಡಿರ್ರಿ, ಹೊತ್ತ ಆಗ್ತೆತಿ ನಮಗ", ಅಂತಾ ನಿರ್ವಾಹಕ ಸಮಾದಾನಕರ ಬಹುಮಾನ ನೀಡಿದ. ವಾದ-ವಿವಾದಗಳು ಅಂತ್ಯವಾಗಿ ನಿರ್ಣಯವು ಹೊರಡಿತು. ಇಗಾ ನಮ್ಮ ಮುದ್ದು ಕೃಷ್ಣ ಕಣ್ಣು ತಗೆದು ನೋಡಿದಾ. ಏನಪ್ಪಾ ಕೃಷ್ಣಾ ಯಾವ ಪರಿಕ್ಷೆ ನನ್ನ ಹತ್ತಿರ ತಗೋತಾ ಇದಿಯಾ ಅಂತಾ ಮನದಲ್ಲಿ ಅಂದುಕೊಂಡೆ, ಇದು ಇದಿಯಾ ಹೊರಾಟವೊ ವಿದಿಯಾ ಚಲ್ಲಾಟವೊ ನನಗೆ ತಿಳಿಯಲಿಲ್ಲಾ. ಯಶೊದೆ ಸಿಗಲಿಲ್ಲಾ ಅಂದರೆ ಏನ್ ಮಾಡೋದು ಮನೆಲಿ ಕುರುಕ್ಷೆತ್ರ ಯುದ್ದಾನೆ ಆಗುತ್ತೆ, ಇನ್ನು ಮದುವೆನು ಆಗಿಲ್ಲಾ ಇ ಮಗು ಯಾರದು ಅಂತಾ ಕೇಳಿದ್ರೆ ಎನ್ ಹೇಳಲಿ, ಅದರಲ್ಲೂ ನನ್ನ ಶತ್ರು ತನ್ನ ಪಾಶುಪತಾಸ್ತ್ರದ ಪ್ರಯೋಗ ಮಾಡಿಯೇ ಬಿಡ್ತಾನೆ ಎಂದು ಮುಂದಾಲೊಚನೆಯೋ ಮಂದಾಲೊಚನೆಯೋ ತಿಳಿಯದೆ ಮನಸ್ಸು ಕತ್ತರಸಿ ನೆಲಕ್ಕೆ ಬಿತ್ತು, ತಾಯಿ ರೇಣುಕಾದೇವಿ(ಯಲ್ಲಮ್ಮಾ) ನಿನೇ ನನ್ನ ಇ ಅಗ್ನಿ ಪರಿಕ್ಷೆಯಲ್ಲಿ ಪಾಸು ಮಾಡಿಸು ಅಂತಾ ಕಣ್ಣಮುಚ್ಚಿ ಬೆಡಿಕೊಂಡು, ಆ ಮಗುವನ್ನು ಎತ್ತಿಕೊಂಡು ಹೋಗೋ ಜನರ ಗುಂಪಲ್ಲಿ ನುಸಳಿದೆ.

................................................................................................

ಕರ್ನಾಟಕ ಪೋಲಿಸ್ ವಿರಪ್ಪನ್ನಾ ಕರುನಾಡ ಕಾಡಿನಲ್ಲಿ ಹುಡುಕುವ ಹಾಗೆ ನಾನು ನನ್ನ ಸಿ.ಐ.ಡಿ ಕೆಲಸ ಆ ಜನರ ಬೀಡಿನಲ್ಲಿ ಆರಂಭಿಸಿದೆ, ಅಪಾಯದಲ್ಲು ಉಪಾಯ ವಿರುವುದು ನನಗೂ ಒಂದು ಉಪಾಯದ ದೀಪ ಹಚ್ಚಿತು. ಆ ಮಗುವನ್ನು ಹೆಗಲ ಮೆಲೆ ಕೂಡಿಸಿಕೊಂಡು ಹುಡುಕಿದೆ, ಆ ಜನರ ಗುಂಪಲ್ಲಿ ಮಗು ಏನಾದರು ತಾಯಿಗೆ ಕಾಣಿಸಿದರೆ ನನ್ನ ಹತ್ತಿರ ಬರಬಹುದೆಂದು ನನ್ನ ಉಪಾಯದ ಉತ್ತರ. ಮತ್ತೆ ತೆಲೆಯಲ್ಲಿ ವಿಚಾರಗಳಾ ಗುಡುಗು ಸಿಡಿಲುಗಳು ಘರ್ಜಿಸಿದವು, ಯಾವ ತಾಯಿಯಾದರು ತನ್ನ ಹೆತ್ತ ಕರುಳನ್ನು ಹೀಗೆ ಮರೆತು ಹೋಗಬಹುದೆ, ಹಸು ತನ್ನ ಹಾಲನ್ನು ತಾನೆ ಕುಡಿಯುತ್ತಾ? ಮಹಾಭಾರತದಲ್ಲಾದರೆ ಕುಂತಿಯು ಬಿಟ್ಟು ಹೊದದ್ದು ವರಪುತ್ರನನ್ನು, ಆದರೆ ತಾನು ಹೆತ್ತ ಪುತ್ರನನ್ನು ಹಾಗೆ ಬಿಟ್ಟು ಹೋಗಲಿಲ್ಲವಲ್ಲಾ, ಇ ಮಗು ಆ ತಾಯಿಯ ಹೆತ್ತ ಪುತ್ರನೋ? ಅಥವಾ ಘಝನಿ ಸಿನಿಮಾ ಅಮಿರಖಾನ್ ತರಾ ಇವಳಿಗು ಮರಿಯುವ ರೋಗವೋ? ತನ್ನ ಹೆತ್ತ ಕರುಳನ್ನು ಮರೆಯುವಷ್ಟು ಕಠಿಣ ರೋಗವು ಇದೆಯೆ ಇ ಭೂಮಿ ಮೇಲೆ? ಏನೋ ಅಂತಾರಲ್ಲಾ ಅರವತ್ತಕ್ಕೆ ಅರಳು ಮರಳಂತೆ, ಇ ಕಲಿಗಾಲದಲ್ಲಿ ಅದು ಮೂವತ್ತಕ್ಕೆ ಇಳಿದಿದೆಯೊ ಎನೋ? ಇಷ್ಟೊತ್ತು ಸುಮ್ಮನಿದ್ದ ಮಗು ತನ್ನ ಹಳೆಯ ಅಳುವ ರಾಗವನ್ನು ಮತ್ತೆ ಪ್ರಾರಂಭಿಸಿತು. ನನಗೋ, ಏನ ಮಾಡಬೇಕು ತಿಳಿತಾ ಇಲ್ಲಾ. ಅಂಧನಿಗೆ ಚಕ್ರವ್ಯೂಹ ಭೇದಿಸು ಅಂದ ಹಾಗೆ ಆಯಿತು. ಸೂತ್ರ ಸಿಕ್ರೆ ಗಾಳಿಪಟಾ ತಾನಾಗಿ ಚೆನ್ನಾಗಿ ಹಾರುತ್ತೆ ಅಂತಾ ಮಗುವಿನ ತಾಯಿ ಹುಡುಕುವ ಕೆಲಸಕ್ಕೆ ಪೇಪರ ಕಟ್ಟ ಮಾಡಿದೆ. ಅದೇ ಕ್ಷಣದಲ್ಲಿ ನನ್ನ ಕಣ್ಣುಗಳಾ ಸಾಧನೆಗೆ ನೊಬೆಲ್ ಸಿಕ್ಕಿತು. ನೀಲಿ ಬಣ್ಣದ ರಂಗು ರಂಗಿನಾ ಸೀರೆ, ಕಪ್ಪು ಕುಪ್ಪಸ, ಹಾ... ಅದೇ ವಸ್ತ್ರಗಳನ್ನಾ ವಾಹನದಲ್ಲಿ ನೋಡಿದಾ ನೆನಪು. ಓಡಿ ಹೋಗಿ ಮುಂದೆ ನೋಡಿದೆ. ಅದೆ ಮುಖ, ಮನವು ಯುರೆಕಾ ಯುರೆಕಾ(ಆರ್ಕಿಮಿಡಿಸ್) ಜಟಪಟಿಸಿತು. ಓಡಿ ಓಡಿ ಮಗುವಿನ ತಾಯಿಯ ಹತ್ತಿರ ಹೋದೆ. ಮಗುವಿನ ತಾಯಿಯ ಮುಂದೆ ನಿಂತೆ. ಮೆಲ್ಲನೆ ನಿಟ್ಟುಸಿರು ಬಿಟ್ಟೆ. ಎಲ್ಲಾ ಪ್ರಶ್ನೆಗಳಿಗು ಒಂದೇ ಉತ್ತರದಂತೆ ನನ್ನಾ ಎಲ್ಲಾ ಕಷ್ಟಗಳಿಗು ಪರಿಹಾರ ಸಿಕ್ಕಿತು ಅಂತಾ ಮುಗಳ್ನಕ್ಕೆ.
"ರೀ, ಯಾರ್ರೀ ನೀವಾ, ಎನ್ ಆಗಬೇಕಾಗಿತ್ತು? ಹಿಂಗ್ಯಾಕ ನನ್ನ ಮುಂದ ಬಂದ ನಿಂತ್ರಿ", ಎಂಬ ಮಗುವಿನ ತಾಯಿಯ ಪ್ರಳಯಾಂತಕ ಮಾತು ನನ್ನ ಕಿವಿ ತಮಟೆಯ ಹತ್ತಿರ ಬಂದು ವಿಸ್ಪೋಟಗೊಂಡಿತು. ಭಯಂಕರವಾದ ಕಾಳ್ಗಿಚ್ಚಲ್ಲಿ ಸಿಡಿಲುಗಳಾ ಅಬ್ಬರದಂತೆ ನನ್ನ ಹೃದಯ ಬಡಿತ ಆಕಾಶ ಮುಟ್ಟಿತು. ಮೇಘ ಪರ್ವತಗಳಾ ಮಡುವಿನಲ್ಲಿ ಲಾವಾರಸದ ಸ್ಪೊಟದಂತೆ ಹೃದಯದಲ್ಲಿ ಅಗ್ನಿಪರ್ವತ ಅರಳಿತು. ಕಾಲುಗಳು ತಮ್ಮ ಶಕ್ತಿ ಕಳೆದುಕೊಂಡು ಸೋತವು. ಕೈಗಳು ನರಹೀನತೆ ತೋರಿದವು. ಕಣ್ಣ ರೆಪ್ಪೆಗಳು ಕಾದಾಟಕ್ಕೆ ಸಜ್ಜಾದವು. ಗಂಟಲು ಮರುಭೂಮಿಯಾಯಿತು. ನಾಲಿಗೆಯ ನರಗಳು ನರಳಾಡಿದವು. ಬಾಯಿ ಭಾವುಕವಾಗಿ, ತಾನು ಏನು ಹೇಳಲಿ ಎಂಬ ಆತಂಕಕೆ ತೆಕ್ಕೆ ಹಾಕಿತು. ಮನವೊಂದು ಮಾತ್ರ, ಮಗುವಿನ ತಾಯಿಗೆ ಕಾಯಿಲೆಯಿಂದಾ ಅರಿವು ಮರೆವಿನಾ ಒಂದು ಪಾತ್ರವಿರಬಹುದೆಂದು ತನ್ನನು ತಾನು ಅರೆ ಜೀವ ಮಾಡಿಕೊಂಡಿತು.
"ರೀ... ಅಕ್ಕಾರ, ನಾನ್ರೀ... ಬಸ್ಸನ್ಯಾಗ ನಿಮ್ಮ ಇಂಬಾಲಿ ಕುಂತಿದ್ನಿ, ಇ ಬಿಸಿಲ್ನಾಗ್ ನಿಮಗ ತ್ರಾಸ್ ಆಗಬಾರದಂತ, ನಿಮ್ಮ ಮಗನ್ನ ನನ್ನ ತೊಡಿ ಮ್ಯಾಲ ಕುಂದರಿಸಿ ಕೊನ್ರಿ, ತಗೊ ರಿ, ನಿಮ್ಮ ಮಗನ್ನ, ಯಾವ್ದರ ಬ್ಯಾರೇ ದ್ಯಾಸ(ವಿಚಾರ)ನ್ಯಾಗ ನಿಮ್ಮ ಮಗನ್ನ ಬಿಟ್ಟ ಹಂಗ ಇಳದ ಬಂದ್ರಿ ಅನಸತೇತಿ. ತಗೋರಿ ನಿಮ್ಮ ಮಗನ್ನ್" ಅಂತಾ ಟೈಮ್ ಇಲ್ಲದೆ ಇರುವಾಗ ಮದುವೆಲಿ ಅನ್ನೊ ಮಂತ್ರದ ತರಾ ಒಂದೆ ಉಸಿರಿನಲ್ಲಿ ಹೇಳಿದೆ. "ಯಾರ್ರೀ ನೀವು? ನಿಮ್ಮ ತಲಿ ಗಿಲಿ ಸರಿ ಅಯ್ತಿಯೊ ಇಲ್ಲೊ? ಸನೆದರಾಗ ಧಾರವಾಡ(ಹುಚ್ಚ ಆಸ್ಪತ್ರೆ)ಕ ಹೋಗಿ ಬಂದೇರಿ ಅನಿಸ್ತೇತಿ. ಎಲ್ಲಾ ಕರಡಿ ಮರಿ ನೋಡಾಕ ಒಂದ ಇದ್ರ್, ಎಲ್ಲಾದ್ರದು ಅವ್ವ ಒಂದ್ ಕರಡಿ ಇರಾವ್ರಗತೆ ಮಾತಾಡಕತೆರ್ಲಾ, ನಮ್ಮ ಗೌಡ್ರ ಇಲ್ಲಿ ಇದ್ರ ಅಂದ್ರ ಮಿಸಿ ತಿರುವಾಕ ಕೈ ಇಲ್ಲದಾಂಗ ಮಾಡತಿದ್ರು, ನಿನ್ನ ಪುನ್ನೆ ಇವತ್ತ ಅವ್ರ ಬಂದಿಲ್ಲಾ, ಸನ್ನ ವಯಸ್ಸನ್ಯಾಗ ತಪ್ಪ ಮಾಡಿ ನಿಮಗ ಮಕ್ಕಳ್ನಾ ಸಾಕಾಕ ಗತಿ ಇಲ್ಲಾ ಅಂದ್ರಾ, ಯಾವದರ ಅನಾಥಾಶ್ರಮಕ ಕೊಟ್ಟ ಬರ್ರಿ. ಹತ್ತ ಹಡದಾಕಿ ಮುಂದ ಹಿಂಗ ಮಾತಾಡಿದ್ರ ಜನಾ ಕುಂಡಿಲೇ ನಕ್ಕಾರು. ಗೊತ್ತಾಗುಲ್ಲಾ ನಿಮಗ? ಹೊಟ್ಟಿಗೆ ಎನ್ ತಿಂತೀರಿ" ಅಂತಾ ಯಾವ ಅಸ್ತ್ರವು ದ್ವಂಸಗೊಳಿಸದಾ ಬ್ರಹ್ಮಾಸ್ತ್ರ ಬಿಟ್ಟಳು, ವಿದಿ ವಿಪರೀತಕ್ಕೆ ವೈಭವ ತೊರೆದ ಹರಿಶ್ಚಂದ್ರ ಮಹಾರಾಜನಾ ಕಥಾನಕವು ಕಣ್ಣಮುಂದೆ ಮಿಂಚಿಹೊಯಿತು, ಏನು ಅರಿಯದ ಮಗುವಿನ ಮುಗ್ದ ಮುಖ ನೊಡಿ ಕಣ್ಣುಗಳು ಸ್ನಾನ ಮಾಡಿದವು. ಬುದ್ದಿಗೆ ಮಂಕ ಬಡಿದ ಹಾಗೆ ಆಯಿತು. ಮನದಲ್ಲಿ ಕತ್ತಲೆಯ ಕೂಪ ಪ್ರಚಲಿಸಿತು. ಕೋಗಿಲೆಯ ಮರಿ ತನ್ನ ತಾಯಿ ಕಾಗೆಯೆಂದು ತಿಳಿದು "ಕೂಹು... ಕೂಹು..." ಅಂತಾ ಕೂಗಿದಾಗ, ಕಾಗೆಯ ಮನದ ರೊಧನ ನನ್ನ ಮನ ಮುಟ್ಟಿತು. ವಿಧೀಯಾಟದ ಮುಂದೆ ದೇವರ ಆಟ ನೀರಿನ ಮೇಲಿನ ಗುಳ್ಳೆಯಂತೆ ಅಂತಾ ಬ್ರಮಿಸಿ ನನ್ನ ಬಾಯಿಗೆ ಸ್ವಲ್ಪ ಕೆಲಸ ಕೊಟ್ಟೆ.
"ಹತ್ತಿ ಹೊಲದಾಗ ರೆಷ್ಮಿಹುಳಾ ಬದುಕಾಕ ಆಗುತ್ತಾ? ಎಲ್ಲಾ ಕರಡಿ ಮರಿಗೊಳ ಕರ್ರಗ ಇದ್ರು ಅವಗಳ ತಾಯಿ ತನ್ನ ಮರಿನಾ ಹೊಗಿ ಎತ್ತಗೊತೇತಿ. ನಿಮಗ ಯಾವ್ದರ ಮರಿಯುವಂತಾ ಬ್ಯಾನಿ(ಕಾಯಿಲೆ) ಇದ್ರ ಹೇಳ್ರಿ. ಬೇಕಾದ್ರ್ ನೆನಪ ಮಾಡ್ಕೋರಿ. ನಾ ನಿಮ್ಮ ಮನಿಮಟಾ ಹೋಗಿ ಇಬ್ಬರ್ನು ಬಿಟ್ಟ ಬರತೇನಿ. ಕಣ್ಣ ಅರಿದಿದ್ರು ಕರಳ ಅರಿದುಲ್ಲೆನ್ರಿ? ನಿವ್ ಹಿಂಗ ಹೇಳಾಕ ಹೋಗಬ್ಯಾಡ್ರಿ, ನನ್ನ ತಲಿ ಬರೊಬ್ಬರ್ ಐತಿ."
"ಇದೇನೋ ಅಂತಾರಲ್ಲಾ ಬೆಳಿಗ್ಗೆ ಎದ್ದ ಹಾರು ಕುದರಿ ಹತ್ತಿದಾಂಗ ಆತಿ, ಅನ್ನಾ ಮಾಡು ಗಡಗಿ ಎಂದರ್ ವಿಷಾ ಕಕ್ಕತೆತಿ ಏನ್, ಎಂದರ್ ಹೆತ್ತವ್ವ ತನ್ನ ಕರಳ್ನಾ ಮರತ ಹೊಕ್ಕಾಳು? ನಿನಗ ತಲಿ ಗಿಲಿ ಸರಿ ಐತೋ ಇಲ್ಲೋ, ನಡಿ ಅತ್ತ ಅಗ್ಗದ ಒಂದ್. ಬೆಳಿಗ್ಗೆ ಬೆಳಿಗ್ಗೆ ರಂಡಿ ಮುಕಾ ನೊಡಿದಾಂಗ ಆತಿ, ನಡಿ ಇನ್ನ" ಅಂತಾ ಹೆಳುತಾ ಮಗುವಿನಾ ತಾಯಿ ಹೊರಡಹತ್ತಿದಳು.
..................................................................................................................

ಕಾರ್ಮೋಡದಾ ಮಡಿಲಲ್ಲಿ ಅವಿತಿರುವಾ ಸಿಡಿಲಿನಾ ಮರಿಗಳು, ಸಮಯದಾ ಸದಾವಕಾಶಕ್ಕೆ ಹೊಂಚು ಹಾಕುವಾ ನರಿಯಂತೆ, ಭೂಮಂಡಲದಾ ಮೇಲೆ ಕೆಂಡ ಕಾರಿದ ಹಾಗೆ ನನ್ನ ಹೃದಯ ತಲ್ಲಣಿಸಿತು. ಸಾಗರವು ಸೂರ್ಯನನ್ನು ನುಂಗುವಹಾಗೆ ನಾನು ಅರಿವಿಲ್ಲದೆ ಸಮಸ್ಯೆಗಳ ಚಕ್ರವ್ಯೂಹದಲ್ಲಿ ನುಗ್ಗಿದೆ.
"ನಿಲ್ಲರೀ... ಅಕ್ಕಾರ, ದಯವಿಟ್ಟ ನನ್ನ ಮಾತ ಕೇಳ್ರಿ, ನೀರ ಕೆಳಿದಾವ್ರಿಗೆ ಊಟಾ ಮಾಡಿಸಿ ಮಜ್ಜಿಗಿ ಕೊಡು ವಂಶ ನಮ್ಮದ್. ನನ್ನ ಬಾಯಾಗ ಸುಳ್ಳ ಬಂದ್ರ, ಭೂಮಿ ಮ್ಯಾಲ ಇರೊ ನೀರ ಬತ್ತಿ ಹೊಕ್ಕೆತಿ, ಅಂತಾದರಾಗ ನನ್ನ ಕಣ್ಣ, ಕಿವಿ, ಮನಸ್ಸ ಎಂದು ಮೋಸಾ ಮಾಡಾಕ ಸಾದ್ಯಾನ ಇಲ್ಲಾ. ನನಗ ಇನ್ನೂ ಮದುವಿನು ಆಗಿಲ್ಲಾ, ನೀವಾ ಅವ್ರು, ಆ ಬಸ್ಸಿನ್ಯಾಗ ಇದ್ದಾವ್ರ್, ಇ ಕೂಸನ್ ನಾ ಮನಿಗಿ ಒದ್ನಿ ಅಂದ್ರ ನಮ್ಮ ವಂಶದ ಗತಿ ಏನ ಆಗಬಾರ್ದು, ನಿಮಗ ಎನರ್ ಸಮಸ್ಯೆ ಇದ್ರ ಹೇಳ್ರಿ, ಇಲ್ಲೆ ಬಗಿ ಹರಿಸುನು, ಇಲ್ಲಾ ಅಂದ್ರ ಮಜಾಕ(ತಮಾಶೆ) ಮಾಡಾಕತಿರ ಹೇಳಿ ಬಿಡ್ರಿ. ನನಗ ಉಸಿರ ನಿಂತಾಂಗ ಆಗಾಕತೆತಿ. ಇಲ್ಲಾ ಅಂದ್ರ ಪೋಲಿಸ್ ಸ್ಟೆಶನ್ಗೆ ಹೋಗುನು ಬರ್ರಿ, ಯಾಡರಾಗ ಒಂದ ಆಗಬೆಕ್" ಅಂತಾ ವಿನಮ್ರದಿಂದಾ ಮಗುವಿನ ತಾಯಿಯನ್ನಾ ಕೇಳಿದೆ. ಇಷ್ಟು ಹೊತ್ತಿಗಾಗಲೆ ಕುರಿಗಳು ಸಾರ್ ಕುರಿಗಳು ಅನ್ನೊ ಹಾಗೆ ಅಲ್ಲಿರುವಾ ಜನವೆಲ್ಲಾ ನಮ್ಮ ಸುತ್ತುವರೆದಿತ್ತು, ನಮ್ಮ ಸಮಾಜದಲ್ಲಿ ಹೆಣ್ಣು ಮಕ್ಕಳಿಗೆ ತುಂಬಾ ಗೌರವ, ರಾಮಾಯಣ ಮಹಾಭಾರತಗಳೆ ನಡೆದದ್ದು ಹೆಣ್ಣು ಮಣ್ಣಿಗಾಗಿ ಅಲ್ವಾ? ಎಲ್ಲಾ ಜನರು ನಾನೇ ತಪ್ಪು ಮಾಡಿದವನಂತೆ ನನ್ನನ್ನೇ ವಾಲಿಯ ವಕ್ರದೃಷ್ಟಿಯಂತೆ ಕೆಕ್ಕರಿಸಿ ನೋಡುತಿದ್ದರು. ಒಂದು ಕ್ಷಣ ಇ ಜನರ ಗುಂಪು ಮತ್ತೆ ಅವರ ಹಾವ ಭಾವ ನೋಡಿ ನನ್ನ ಮನವು ಭಯದ ಭೂತ ಭಂಗಲೆಯಾಯಿತು. ನನಗೆ ಇ ಸಮಸ್ಸೆಯ ಪರಿಹಾರ ಇನ್ನೂ ಮರಿಚಿಕೆಯೇ ಅಂತಾ ಅನಿಸಿತು, ಅಷ್ಟರಲ್ಲಿ ಮಾಮರದ ಕೋಗಿಲೆಗೆ ವಸಂತಕಾಲ ಬಂದ ಹಾಗೆ ಇ ಜನರ ಗುಂಪು ನೋಡಿ ಆರಕ್ಷಕ(ಪೊಲಿಸ್)ನ ಆಗಮನದಿಂದಾ ಮನವು ನಲಿಯಿತು. ಜೊತೆಗೆ ಗಾಬರಿಯು ಆಯಿತು. ಯಾಕಂದ್ರೆ ಇಲ್ಲಿಯವರೆಗು ನಮ್ಮ ವಂಶದಲ್ಲಿ ಯಾರೂ ಪೋಲಿಸ್ ಠಾಣೆಯ ಮೆಟ್ಟಿಲು ಹತ್ತಿಲ್ಲಾ,
"ಯಾಕ ಏನಾತಿ? ಎಲ್ಲಾರು ಹಿಂಗ್ಯಾಕ ಗುಂಪ ಆಗಿ ನಿಂತೇರಿ?" ಅಂತಾ ಕಾರ್ಕೊಟಕ ಸರ್ಪ ವಿಂಧ್ಯ ಪರ್ವತದಲ್ಲಿ ನುಸುಳುವಾ ಹಾಗೆ ಅದೆ ಗತ್ತಿನಲಿ ಜನರ ಗುಂಪಿನಲ್ಲಿ ನುಸುಳಿದನು. ಸರ್ಪಿನ ಅಬ್ಬರಕ್ಕೆ ಪ್ರಾಣಿ ಪಕ್ಷಿಗಳು ನಡುಗಿ ಮರೆಯಾದಂತೆ ಜನರು ಆರಕ್ಷಕನಿಗೆ ದಾರಿವಿತ್ತರು.
"ಎನಿದಾ?... ಇಲ್ಲೆನ್ ಮಂಗ್ಯಾನ ಆಟ ನಡದೇತಿ ಎನ್, ಹಿಂಗ್ಯಾಕ ನಿಂತೆರಿ ಎಲ್ಲಾರು?" ಅಂದ ಕ್ಷಣ ನನ್ನ ಮತ್ತು ಮಗುವಿನ ತಾಯಿಯ ಬಿಟ್ಟು ಎಲ್ಲರು ಹಿಂದೆ ಸರಿದರು. ಅವನು ನನ್ನ ಒಮ್ಮೆ ನೋಡಿದಾ, ಆಕೆಯನ್ನಾ ಒಮ್ಮೆ ನೊಡಿದಾ. ಮತ್ತೆ ನನ್ನಾ ಕಳ್ಳನಂತೆ ನೋಡಿದಾ. ನನಗಂತು ಈಗ ಇನ್ನೂ ಭಯ ದಂಗುಬಡೆಯಿತು.
"ಏನವಾ ಇದಾ, ಏನ್ ಆತಿ? ಎನರ ಕಾಡಾಕತಾನೆನ ಇ ಹುಡಗಾ ಹೇಳ್? ಮುಕಳಿ ಊರಿ ಕುಂದ್ರಲಾಂಗ ಮಾಡ್ತೇನ್ ಅವನ್ನ್",
"ಏನು ಇಲ್ಲರೀ ಸಾಹೆಬ್ರ, ಇವಾ ಯಾರೋ ನನಗ ಗೊತ್ತಿಲ್ಲಾ, ಇ ಸನ್ನ ಕೂಸ್ ಅವಂದೊ, ಬೆರೆಯವರ್ದೊ ಗೊತ್ತಿಲ್ಲಾ, ಇದು ನಿಂದಾ, ತಗೊಂಡ ಹೋಗು ಅಂತ ಗಂಟ ಬಿದ್ದಾನ್ರಿ, ಒಬ್ಬಾಕಿ ಬಂದೆನಂತ ಹಿಂಗ ಮಾಡಾಕತಾನೋ, ಇಲ್ಲಾ ಅವಂಗ ತಲಿ ಗಿಲಿ ಕೆಟ್ಟೆತೊ ಗೊತ್ತಾಗವಾಲ್ತುರೀ, ನೋಡಿರ್ರ ಒದಿದಾವ್ರಂಗ, ಚಲೊ ಮಂದ್ಯಾವ್ರಗತೆ ಕಾನತಾನು, ನಿವ ನೊಡಿ ಸ್ವಲ್ಪ ಬುದ್ದಿ ಹೇಳಿ ಕಳಸಲ್ರಾ" ಇ ಮಾತು ಕೇಳಿ ನಾನು ಕಣ್ಣಿದ್ದು ಕುರುಡುನಾದೆ. ಮೈ ತುಂಬಾ ಬೆವರು, ಒಮ್ಮೆಲೆ ಸ್ಥಂಭಿಬೂತನಾದೆ.
"ಯಾಕಲೇ ಮಗನಾ, ನೋಡಾಕ ಒಳ್ಳೆ ಮನ್ಯಾವ್ರಗತೇ ಕಾಣತಿ, ಹಿಂತಾ ಹೆಲ ತಿನ್ನುವಂತಾ ಕೆಲಸಾ ಮಾಡುದು? ತಿಳಿಂಗುಲ್ಲಾ ನಿನಗ, ಒಮ್ಮಿ ಲಾಕಪ್ಪನ್ಯಾಗ ಹಾಕಿ ಮಯ್ಯಾಗ ಎಷ್ಟ ಎಲಬ ಅದಾವಂತ ಎನಿಸಿ ತೊರ್ಸಿನಿ ಅಂದ್ರ ಗೊತ್ತಾಕ್ಕೇತಿ ನಿಂಗ, ಖರೇ ಹೇಳ ಎನ ಅಂತ್, ಸುಳ್ಳ ಹೇಳದಿ ಅಂದ್ರಾ, ಹೇಳು ಹೆಸರ್‍ಇಲ್ಲದಾಂಗ ಮಾಡತೇನ್ ನೋಡ್" ಅಂತಾ ಜೈಲಿಗೆ ಕಳಿಸೊ ಅಪರಾದಿ ತರಾನೆ ಮಾತಾಡಿದರು. ನಾನು ನಡಗುವ ಧ್ವನಿಯಲ್ಲೆ ನನ್ನ ಮಾತನ್ನಾ ಮುಂದುವರೆಸಿದೆ.
"ಸರ್, ನಂದೇನು ತಪ್ಪಿಲ್ಲಾರಿ, ನಾನು ಎನ ನಡೀತಂತಾ ಕ್ಲಿಯರ್ ಆಗಿ ಹೇಳ್ತೇನಿ ಕೇಳ್ರಿ. ನಾನು ಆಕ್ಕಾರು ಒಂದ ಬಸ್ಸಿನ್ಯಾಗ ಬರಾಕತ್ತಿದ್ದುರಿ, ಅವರು ನಾ ಕುಂತಲ್ಯನ ಕೂಸನ್ ಎತಗೊಂಡ ನಿಂತಿರ್ರೀ, ಪಾಪ ಅಕ್ಕಾರಿಗಿ ತ್ರಾಸ್ ಆಕ್ಕೆತಿ ಅಂತ, ನಾ ಕೂಸನ್ ನನ್ನ ಕಡೆ ತಗೊನ್ನ್ರೀ, ಸ್ಟಾಪ್ ಬಂದ ಮ್ಯಾಲ ನಾ ಹಂಗ ಮೈಮರತ ಕುತದ್ನಿರಿ, ಅವರ ಎನೊ ಮರತ್ ಹಂಗ ಇಳದ್ರ ಕಾಂತೆತ್ರಿ, ನಾ ಇಗಾ ಬಂದ ನಿಮ್ಮ ಕೂಸನಾ ತಗೊ ಅಂದ್ರ, ಅದ ಅವರ್ದಲ್ಲಾ, ನನಗ ತಲಿ ಗಿಲಿ ಕೆಟ್ಟೆತೊ ಎನೊ ಅಂತಾ ಅನ್ನಾಕತಾರ್ರಿ, ನನಗ ಇನ್ನು ಮದವಿನು ಆಗಿಲ್ಲರಿ, ಹೆಂಗಸ ಅದಾರಂತ ನಿವ ಅವ್ರ ಹೇಳುದು ಖರೇ ಅಂತಾ ತಿಳಕೊಕ ಹೊಗಬ್ಯಾಡ್ರಿ. ನಾ ಖರೇನ ಹೇಳುದ್ರಿ. ನನ್ನ ನಂಬ್ರಿ." ಇದನ್ನಾ ಕೇಳಿ ಆರಕ್ಷಕನಿಗೆ ಬಿಡಿಸಲಾರದ ಒಗಟಿನ ತರಾ ಅನಿಸಿತು, ಇತ್ತ ನಾ ಹೇಳೂದು ಸತ್ಯ ಅಂತ ಅನಿಸ್ತಾ ಇತ್ತು, ಆ ಕಡೆ ಆ ಹೆಣ್ಣುಮಗಳು ಹೆಳುವುದು ಸತ್ಯಾ ಅನಿಸ್ತಾ ಇತ್ತು, ಒಮ್ಮೆ ನನ್ನ ಮುಖಾ ನೊಡಿದರು, ಮತ್ತೊಮ್ಮೆ ಆ ಮಗುವಿನ ತಾಯಿಯ ಮುಖ ನೋಡಿದರು. ಅವರ ಕೈಲಿರೊ ಕೊಲನ್ನು ನೆಲಕ್ಕೆ ಎರಡು ಮೂರು ಸಲಾ ಕುಟ್ಟಿದರು, ಸ್ವಲ್ಪಾ ವಿಚಾರ ಮಾಡುತ್ತಾ ನಿಂತಾ. ವಿಕ್ರಮಾದಿತ್ಯನ ಮುಂದೆ ಬೇತಾಳ ಬಿಡಿಸಲಾರದ ಜಠಿಲ ಸಮಸ್ಸೆ ಇಟ್ಟ ಹಾಗಿತ್ತು. ನಾನು ವಿಕ್ರಮಾದಿತ್ಯನ ಪರಿಹಾರಕ್ಕಾಗಿ ತಪಿಸುತ್ತಿದ್ದೆ.

......................................................................................................................

ನಾನು ಮಾತ್ರ ಗ್ರಹಣ ಹಿಡಿದ ಸೂರ್ಯನಾಗಿದ್ದೆ. ಸ್ವಲ್ಪ ಹೊತ್ತಾದ ಮೇಲೆ ಏನೋ ಹೇಳಲು ಮುಂದಾದೆ. ಅದಕ್ಕೆ ಆರಕ್ಷಕ ಅಡ್ಡಿ ತಂದು, "ಸುಮ್ಮನಿರ್ಪಾ ಅಟ, ವಿಚಾರಮಾಡಿ ನೋಡಿದ್ರ್, ಇಬ್ಬರ ಹೇಳುದು ಖರೇ ಅನಿಸ್ತೇತಿ. ಇಬ್ಬರು ಒಳ್ಳೆ ಮನಿತನದವರ ಅಂತ ಅನಿಸತೇತಿ. ಒಂದು ಪರಿಕ್ಷೆ ಮಾಡತೇನಿ, ಅದರಾಗ ಯಾರ ಪಾಸ ಅಕ್ಕೇರೊ ಅವರು ಸುಮ್ನ ಎನು ಮಾತಾಡಲ್ದ ಆ ಕೂಸನ್ನ ತಗೊಂಡ ಹೋಗಬೇಕ್, ಎನಾದರು ತಕರಾರು(ತಡೆ) ತಂದ್ರಿ ಅಂದ್ರ ಯಾವದರ ಸುಳ್ಳ ಕೆಸ ಹಾಕಿ ಜೈಲನ್ಯಾಗ ಒಗಿತೆನಿ. ನಿನಗೂ ಅಷ್ಟೆವಾ ತಂಗೆವ್ವಾ, ಹೆಣ್ಣಮಗಳ ಅಂತಾ ಹಿಂದು ಮುಂದು ಮಾಡಾಂಗಿಲ್ಲ ಮತ್ತ. ಖರೇ ಇರೂದು ಇಗಾ ಹೇಳಬಿಡಾ ಮತ್ತ್, ಆಮ್ಯಾಲ ನಾಯಿ ಕುನ್ನಿಯಾಂಗ ಸುಮ್ನ ಹೊಗಬೇಕಾ ಮತ್ತ್" ಅಂತಾ ಕೋರ್ಟನಲ್ಲಿ ಜಡ್ಜ ನೀಡೋ ಕೊನೆಮಾತಿನ ತರಾ ತಮ್ಮ ನಿರ್ಧಾರ ಹೇಳಿದರು. ನನಗಂತೂ ಮೊದಲ ಬಾರಿಗೆ ದೇವರಲ್ಲಿ ಫೇಲ್ ಆಗಲಿ ಅಂತಾ ಬೆಡಿಕೊಂಡೆ. ಮತ್ತು ಭಯವು ತನ್ನ ಸಂಪೂರ್ಣ ಪರಾಕಾಷ್ಟೆಯಿಂದಾ ನನ್ನನ್ನು ಆವರಿಸಿತು. ಅವರ ಪರಿಕ್ಷೆಯಲ್ಲಿ ನಾನು ಪಾಸಾದರೆ ಆ ಮಗು ನನ್ನದೆ ಅಂತಾ ಆದರೆ ಏನು ಮಾಡಲಿ? ಸಾಯಲೊ? ಬದುಕಲೊ? ಸತ್ತರೆ ಪಾಪ ಆ ಮಗುವಿನ ಗತಿಯೆನಾಗುವುದು? ಇನ್ನೂ ಇ ಲೊಕಜ್ಞಾನ ಅರಿಯದ ಮಗು ಅದು. ಬದುಕಿದರೆ ಇ ಅವಮಾನ ಸಹಿಸಿಕೊಂಡು ಹೇಗೆ ಬದುಕಲಿ? ಮನೆಯಲಿ ನಾನು ಹೀಗೆ ಹೀಗೆ ಹೇಳಿದರೆ ನಂಬುತಾರಾ? ಹೀಗೆ ನನ್ನ ಮನದಲ್ಲಿ ಸುಂಟರ ಗಾಳಿ ಎದ್ದಿತು.
"ನಿಮ್ಮ ಇಬ್ಬರ್ದು ಒಪ್ಪಿಗಿ ಇದ್ರ ಹೇಳ್ರಿ, ಇಲ್ಲಾ ಅಂದ್ರ ನಮ್ಮ ಪೋಲಿಸ್ ಸ್ಟೆಷನ್‍ಗೆ ಹೋಗುನು. ನಮ್ಮ ದೊಡ್ಡ ಸಾಹೇಬ್ರ್ ಬಗಿ ಹರಿಸ್ತಾರು." ನಾನು ಮತ್ತು ಅವಳು ಇಬ್ಬರು ಒಬ್ಬರ ಮುಖ ಒಬ್ಬರು ನೊಡಿಕೊಂಡೆವು. ನನಗಂತು ನನ್ನ ಮೆಲೆ ಸಂಪೂರ್ಣ ನಂಬಿಕೆ ಇತ್ತು. ಯಾಕಂದರೆ ಆ ಮಗು ನನ್ನದಲ್ಲವಲ್ಲಾ, ಮತ್ಯಾಕೆ ಪೋಲಿಸ್ ಸ್ಟೆಷನ್‍ವರೆಗೆ ಹೋಗುವುದು ಅಂತಾ. "ಸರ್, ನಂದಂತು ಒಪ್ಪಿಗೆ ಐತಿ ನೊಡ್ರಿ, ನಿವ್ ಬೇಕಾದ್ ಪರಿಕ್ಷೆ ಮಾಡ್ರಿ" ಅಂತಾ ಹೇಳಿದೆ. ಆಕೆಯು ಇದೆ ತರಾ ಹೆಳಿದಳು. ನನಗೆ ಈಗ ಮತ್ತೆ ಮನಸ್ಸು ತಳಮಳ ಮಾಡಹತ್ತಿತು. ನಾನೆನಾದ್ರು ಬೆರೆಯವರನ್ನೆನಾದರು ಮಾತಾಡಿಸಿದೆನಾ ಅಂತಾ, ಮತ್ತೆ ಆ ಮಗುವಿನಾ ತಾಯಿಯನ್ನು ದಿಟ್ಟಿಸಿ ನೋಡಿದೆ. ಅವಳೆ ಅಂತಾ ಕನ್ಪರ್ಮ ಆಯಿತು. ಮತ್ತೆ ಕಣ್ಣ ಮುಚ್ಚಿ ಗೊತ್ತಿರೋ ಎಲ್ಲಾ ದೆವರ ಹತ್ರಾ ಮನದಲ್ಲೆ ಶರಣಾಗಿ ನೀವೆ ಕಾಪಾಡಬೆಕೆಂದು ಬೇಡಿಕೊಂಡೆ.
"ನೋಡ್ರೀ, ನಿವು ಇಬ್ಬರು ಹತ್ತ ಅಡಿ ದೂರ ನಿಲ್ಲರಿ, ಇ ಕೂಸನಾ ನಡುವ ನಿಲ್ಲಸತೇನಿ, ಮಕ್ಕಳು ದೇವರ ತರಾ ಅಂತ. ಅವಾ ಎಂದು ಸುಳ್ಳ ಹೆಳುಲ್ಲಾ, ಕೆಟ್ಟದ್ದ ಮಾಡಾಂಗಿಲ್ಲಾ. ಅವ್ಕುರ್ ಮನಸ್ಸ ಹಾಲಿನಾಂಗ ಅಂತ ನಿಮಗು ಗೊತೈತಿ. ಅದು ಯಾರ ಕಡೆ ಹೊಕ್ಕೆತೋ ಅದ ಅವರ್ದ. ಈಗಾ ಕೇಳಾಕತಿನಿ ಲಾಷ್ಟ ಸಲಾ, ಎನರ್ ಇದ್ರ ಈಗಾ ಹೇಳರಿ. ಆಮ್ಯಾಲ ಹಂಗ ಹಿಂಗ ಅಂದ್ರಿಂದ್ರ ಐತಿ ನಿಮಗ ಮತ್ತ್." ಇ ಪರಿಕ್ಷೆಯನ್ನ ಕೇಳಿದ ತಕ್ಷಣ ನನ್ನ ಮನಕೆ ಮೊಬೈಲ ಇಲ್ಲದಿರೊ ಮನೆಲಿ ಹುಡಗಿ ಸಿಕ್ಕಷ್ಟು ಖುಷಿಯಾಯ್ತು, ಏಕೆಂದರೆ ಇಲ್ಲಿ ನಾವು ನಿರ್ಣಯವನ್ನು ದೇವರ ಸ್ವರೂಪವಾದ ಮಗುವಿಗೆ ಬಿಟ್ಟಿದ್ದೆವೆ. ಅದು ತನ್ನ ತಾಯಿಯ ಹತ್ತಿರಾನೆ ಹೊಗುತ್ತೆ ಅನ್ನೊ ನಂಬಿಕೆ. ಆದರೆ ಇ ನಂಬಿಕೆ ಕೊಡಲಿಯ ತರಾ ಇನ್ನೊಂದು ಅಪನಂಬಿಕೆ ಸೃಷ್ಟಿಯಾಯ್ತು, ಯಾಕೆಂದರೆ ಇಷ್ಟೆಲ್ಲಾ ಆದರು ಮಗು ನನ್ನ ಹತ್ತಿರಾ ಸುಮ್ಮನೆ ಇದೆ. ಆಕೆಯು ಅದರ ತಾಯಿಯಾಗಿದ್ದರೆ ನಾನು ಮಾತನಾಡುವಾಗ ಅದು ಅವಳ ಹತ್ತಿರ ಹೋಗುತಿತ್ತು. ಇದು ಯಾರ ಬರೆದ ಕಥೆಯೊ ನನಗಾಗಿ ಬಂದ ವ್ಯಥೆಯೊ ಕೊನೆ ಹೇಗೆ ಅರಿಯಲಾರೆ, ಅಂತಾ ನನ್ನ ಮನಸ್ಸಿನಾ ಲಾಳಾಪನೆ ಯಾರು ಕೆಳದಾದರು. ನನ್ನ ಬತ್ತಳಿಕೆಯಲ್ಲಿ ಯಾವ ಬಾಣಗಳು ಇಲ್ಲದಿದ್ದರು ಪರಿಕ್ಷೆಯೆಂಬ ಯುದ್ದಕ್ಕೆ ಸನ್ನದ್ದನಾಗಿ ಒಪ್ಪಿಗೆ ಕೊಟ್ಟೆ. ಬೇರೆ ದಾರಿಯೆ ಕಾಣಲಿಲ್ಲಾ. ಮಗುವಿನ ತಾಯಿ ಕೂಡಾ ಸಮ್ಮತಿಸಿದರು. ಅಲ್ಲಿ ಸೇರಿದ ಜನರಲ್ಲಿ ಒಮ್ಮೆ ನೊಡಿದೆ ಯಾರಾದರು ನನ್ನ ಜೊತೆ ಬಸ್ಸನಲ್ಲಿ ಪ್ರಯಾಣಮಾಡಿದವರು ಇದ್ದಾರೆಯೆ ಅಂತಾ ಯಾರು ಕಾಣಿಸಲಿಲ್ಲಾ. ಮತ್ತೆ ಸೊತ ಮನಸ್ಸಿನೊಂದಿಗೆ ಸುಮ್ಮನಾದೆ. ಆಗ ಆರಕ್ಷಕ ನಿಂತ ಜನರನ್ನೆಲ್ಲಾ ಓಡಿಸಿದ, ಮತ್ತೆ ನಮ್ಮಿಬ್ಬರನ್ನು ಹತ್ತು ಅಡಿ ದೂರ ನಿಲ್ಲಿಸಿ ಮಗುವನ್ನು ಇಬ್ಬರ ನಡುವೆ ತಂದು ನಿಲ್ಲಿಸಿದಾ. ತಾನು ದೂರ ಹೋಗಿ ನಿಂತ. ಇ ಜಗದಲ್ಲಿ ಇ ತರಾ ಸತ್ವಪರಿಕ್ಷೆಯು ನಡೆದಿದೆಯೊ ಇಲ್ಲವೊ ಗೊತ್ತಿಲ್ಲಾ, ಟಿ.ವಿ ನಲ್ಲಿ ಹೀಗೂ ಉಂಟೆನಲ್ಲಿ ಬಂದಿದ್ರೆ ಟ.ಅರ್.ಪಿ ರೇಟ ತುಂಬಾ ಇರತಿತ್ತು ಅಂತಾ ಅನಿಸುತ್ತೆ.  ಇಬ್ಬರು ಮದ್ದೆ ನಿಂತಿದ್ದಾ ಮಗು ಮೊದಲು ತಾಯಿಯನ್ನು ನೋಡಿತು, ನನ್ನ ಸಂತೊಷಕ್ಕೆ ಪಾರವೆ ಇರಲಿಲ್ಲಾ. ತಾಯಿಯ ಹತ್ತಿರ ಹೋಗಲು ಒಂದೆರಡು ಹೆಜ್ಜೆ ಮುಂದೆ ಇಟ್ಟಿತು. ಇ ಜಗದಲ್ಲಿ ದೇವರು ಇದ್ದಾನೆ ಅದಕೆ ಮಳೆ ಬೆಳೆ ಆಗುತ್ತಿದೆ ಅಂತಾ ಸಮಾದಾನಕರ ಬಹುಮಾನಗಳು ಮನಸ್ಸಿಗೆ ಸಿಗುತ್ತಾ ಇದ್ದವು. ಅಬ್ಬಾ ಅಂತಾ ಮನಸ್ಸು ನಿರಾಳವಾಯಿತು.

.....................................................................................................................

ಒಂದೆ ಕ್ಷಣದಲ್ಲಿ ನನ್ನ ಆಸೆಯ ಗೋಪುರ ಸಿಡಿದು ಚೂರು ಚೂರಾಯ್ತು. ಆ ಮಗು ದೇವರಂತೆ ಅಂತಾ ನಾ ಭಾವಿಸಿದರೆ ಅದು ದೆವ್ವದಂತೆ ಅಲ್ಲೆ ನಿಂತು, ತಿರುಗಿ ನನ್ನ ಕಡೆ ನೋಡಿತು. ಮತ್ತೆ ನನ್ನ ಕಡೆ ತಿರುಗಿ ಹೆಜ್ಜೆ ಹಾಕಲು ಪ್ರಾರಂಭಿಸಿತು. ನನಗಂತು ಅಷ್ಟದಿಕ್ಕುಗಳು ಒಮ್ಮೆಲೆ ಕಣ್ಮುಂದೆ ಪ್ರತ್ಯಕ್ಷವಾದವು. ನವ ಭಾವಗಳ ಅರಿವಾಯಿತು. ಹಾಗೆ ಕಣ್ಣಿನಿಂದಾ ಮಗುವಿಗೆ ಸನ್ನೆ ಮಾಡಿದೆ. ನಿನ್ನ ತಾಯಿ ಆಕೆ, ಆಕೆಯ ಹತ್ತಿರ ಹೋಗು ಅಂತ, ನನ್ನ ಯಾಕ್ಟಿಂಗ ನೋಡಿ ಮಗು ಅಲ್ಲೆ ನಿಂತು, ನಗಲು ಪ್ರಾರಂಭೀಸಿತು. ಅದು ಏನೋ ಅಂತಾರಲ್ಲಾ, ಅತ್ತಿಗಿ ಮಾತಿಗಿ ಹತ್ತಿದ್ರ, ಅಳ್ಯಾಗ ಮತ್ತೆದರ್ದೊ ಚಿಂತಿ ಅಂತ, ಮತ್ತೆ ಅದು ನಗುತಾ ನಗುತಾ ಓಡಿ ಬಂದು ನನ್ನ ಕಾಲನ್ನು ಅಪ್ಪಿಕೊಂಡು ನಿಂತಿತು. ಇವತ್ತು ಬೆಳಿಗ್ಗೆ ಯಾರ ಮುಖ ನೋಡಿದ್ನಪ್ಪಾ ಅಂತಾ ಶಪಿಸತೊಡಗಿದೆ. ನೆನಪಿಗೆ ಬಂತು ಬೆಳಿಗ್ಗೆ ನನ್ನ ಅಜ್ಜನ ಮುಖ ನೋಡಿದ್ದೆ. ಬೆಳಿಗ್ಗೆ ಮಾತ್ರ ಶತ್ರು ಆಗ್ತಾನಂದ್ರೆ ದಿನಂಪ್ರತಿಯು ಆಗಬೇಕಾ ಅಂತಾ ಕುಪಿತಗೊಂಡೆ. ದೇವರು ಇದ್ದಾನಾ ಇ ಭೂಮಿಮೆಲೆ ಅಂತಾ, ಅವನು ಇಲ್ವೆ ಇಲ್ಲಾ. ಎಲ್ಲಾ ಸುಳ್ಳು, ಇ ಜಗವೆ ಸುಳ್ಳು, ಅಂತಾ ಅನಿಸ್ತು. ಒಮ್ಮೆಲೆ ನಾಸ್ತಿಕ ಪ್ರಪಂಚಕ್ಕೆ ನನ್ನ ನಾಮವನ್ನು ಅನುಮೊದಿಸಿದೆ. ಮತ್ತೆ ದೆವರು ಇದ್ದಿದ್ರೆ ಹೀಗಾಗುತಿತ್ತಾ? ನಾನು ಎನು ತಪ್ಪು ಮಾಡಿದೆ? ಬೇರೆಯವರಿಗೆ ಸಹಾಯ ಮಾಡಲು ಹೋಗಿ ನನಗೆ ಇ ಗತಿ ಬರಬಾರದು. ಯಾವ ಜನುಮದ ಪಾಪವೊ ಗೊತ್ತಿಲ್ಲಾ, ಇ ಜನ್ಮದಲ್ಲಿ ಇ ಮಗು ಆಗಿ ನನ್ನ ಕಾಡುತ್ತೆ ಅಂತಾ ವಿಚಾರದ ಬುಗ್ಗೆಗಳು ಒಡೆದವು. ನನಗೆ ಏನು ಮಾಡಬೇಕೆಂಬುದು ತೋಚಲಿಲ್ಲಾ. ಆಕಾಶವೆ ಒಮ್ಮೆಲೆ ಕತ್ತರಿಸಿ ನೆಲಕ್ಕೆ ಬಿದ್ದ ಹಾಗಾಯಿತು. ಕಂಬನಿಧಾರೆ ರಬಸದಿಂದ ಉಕ್ಕಿದಳು. ಮನವೆಂಬ ಮರುಭೂಮಿ ತಾಣದಲಿ ಪರಿಹಾರವೆಂಬ ಒಯಾಸಿಸ್ ಕಾಣದಾಯ್ತು.
"ನೊಡ ಮಗನಾ, ನೋಡಾಕ ಹತ್ತಿ ಹಣ್ಣ ಇದ್ದಾಂಗ ಅದಿ ಆದರ ಒಳಗ ಎಲ್ಲಾ ಹುಳಕ ಐತಿ, ಸುಮ್ಮನ ಆ ಕೂಸನ್ ತಗೊಂಡ ಹೋಗ್, ಇಲ್ಲಾಂದ್ರ ಬೆನ್ನಾನು ಎಲಬ ಮುರದೆನ್ ಮಗನಾ, ತುಟೆ ಪಿಟಕ್ ಅಂದಿ ಅಂದರಾ,  ತಳಾ ಬುಡಾ ನೋಡದ ಯಲ್ಲಮ್ಮನ ಕೊಳ್ಳದಾಗ ಉದೋ.. ಉದೋ.. ಅನಸ್ತೇನಿ ನೋಡು. ನಡಿ ಇನ್ನ ಕತ್ತಿಸುಳಿಮಗನಾ, ನೀ ಹೋಗವಾ ತಂಗೆವ್ವಾ ಇಂತಾ ಮಂದಿ ಇರುದ ಎಲ್ಲಿ ಹೋದರು, ಹತ್ತ ಗಡಿಗಿದಾಗ ಒಂದ ಗಡಗಿ ತುತ ಇದ್ದಾಂಗ". ಆರಕ್ಷಕನ ಇ ಮಾತು ಕೇಳಿ, ದೇವರೆ ನೀನು ಇದ್ದರೆ ನನ್ನ ಶತ್ರುಗಳ ಕನಸಿನಲ್ಲು ಇ ತರಾ ಸನ್ನಿವೆಶ ತರಬೆಡಪ್ಪಾ ಅಂತಾ ಅಂದು, ಸುತ್ತಮುತ್ತಲು ಒಮ್ಮೆ ನೋಡಿದೆ, ಎಲ್ಲರ ಮುಖಗಳು ಮಂಜು ಮಂಜಾಗಿ ಕಾಣಹತ್ತಿದವು. ನನಗೆ ಈಗ ನೆನಪಿಗೆ ಬಂತು. ತಾತ ಹೇಳಿದ ಸೂರ್ಯದೇವನ ಶಾಪದ ಬಗ್ಗೆ, ತಾತ ಎಷ್ಟು ಹೇಳಿದರು ನಾನು ಕೇಳುತ್ತಿರಲಿಲ್ಲಾ. ನಾನು ಯಾವಾಗಲು ತಡವಾಗಿ ಸೂರ್ಯ ಉದಯಿಸಿದಮೇಲೆನೆ ಏಳುತಿದ್ದೆ. ಸೂರ್ಯನ ಶಾಪ ಅದು ಹೀಗೆ ಇವತ್ತು ತಗಲುತ್ತೆ ಅಂತಾ ನಾನು ಎಂದು ತಿಳಿದಿರಲಿಲ್ಲಾ, ಒಮ್ಮೆ ತಲೆ ಎತ್ತಿ ಸೂರ್ಯನನ್ನಾ ನೋಡಿದೆ, ಸೂರ್ಯ ನನಗೆ ಕೆಂಪಾಗಿ ಗಹಗಹಿಸಿ ನಗುವ ಹಾಗೆ ಕಂಡ. ಸ್ವಲ್ಪ ಸಮಯದಲ್ಲಿ ಕತ್ತಲು ಸಂಪೂರ್ಣವಾಗಿ ನನ್ನ ಕಣ್ಣುಗಳಾ ಬಿಂಬಗಳಿಗೆ ಆವರಿಸಿತು. ಭೂತಾಯಿಯ ಹಿಡಿತ ಕಳೆದುಕೊಂಡು ಹೆಮ್ಮರ ಉರುಳುವಹಾಗೆ, ನನ್ನ ದೇಹ ನೆಲದ ಆಸರೆ ಹಿಡಿದುಕೊಂಡಿತು. ಜೋರಾಗಿ ಬಾಯಿ ತರೆದು ಚೀರಬೇಕೆಂದು ಪ್ರಯತ್ನಿಸಿದೆ, ಬಾಯಿನೇ ತೆರಿತಾನೆ ಇಲ್ಲಾ.
"ಯವ್ವಾ......" ಅಂತಾ ಜೊರಾಗಿ ಕಿರುಚಿದೆ. ಕಷ್ಟಪಟ್ಟು ಕಣ್ಣು ತಗೆದು ನೋಡಿದೆ, ಯಾವ ಜನಾನು ಕಾಣ್ತಾ ಇಲ್ಲಾ, ಆ ಕಡೆ ಇ ಕಡೆ ನೊಡಿದೆ, ಆರಕ್ಷಕನು ಇಲ್ಲಾ, ಮಗುವಿನಾ ತಾಯಿಯು ಇಲ್ಲಾ, ಕಣ್ಣ ಉಜ್ಜಿದೆ ಪಿಳಿಪಿಳಿ ಮಾಡುತ್ತಾ ಇನ್ನೊಮ್ಮೆ ನೊಡಿದೆ. ನೊಡಿದರೆ ಇದು ನನ್ನ ಮನೆಯ ಕೊಣೆ, ನನಗೆ ನಂಬಲಾಗ್ತಾ ಇಲ್ಲಾ, ಮಗು ಏನಾದರು ನನ್ನ ಜೊತೆನೆ ಬಂತಾ ಅಂತಾ ಆ ಕಡೆ ಇ ಕಡೆ ಒಮ್ಮೆ ನೊಡಿದೆ, ಮಗೂನು ಇಲ್ಲಾ, ಇಗಾ ನನಗೆ ಅರಿವಾಯಿತು ನಾನು ಕಂಡಿದ್ದು ಕನಸು ಅಂತಾ.
"ಏನ್ ಆತಿ ಲೇ, ಹಂಗ್ಯಾಕ ಚಿರಿದಿ" ಅಂತಾ ನನ್ನ ಶತ್ರು ಅಂದರೆ ನನ್ನ ತಾತ ತನ್ನ ಕೊಲನ್ನು ಕೈಯಲ್ಲಿ ಹಿಡಿದುಕೊಂಡು, ನಾನು ಮಲಗಿದ ಕೊಣೆಗೆ ಬಂದ, ಈಗ ನನಗೆ ಮನಸ್ಸಿಗೆ ಸಮಾದಾನವಾಯಿತು. "ಎಷ್ಟ ಸಲಾ ಹೆಳುದು ನಿನಗ, ಜಲ್ದಿ ಏಳಪಾ ಇಲ್ಲಾ ಅಂದ್ರ ಸೂರ್ಯಾನ ಶಾಪ ಹತ್ತೆತಿ ಅಂತ, ಅದಕ ನೋಡ, ಹಿಂತಾವ ಕನಸ ಬಿಳ್ತಾವ ತಡಾ ಮಾಡಿ ಎದ್ದರ" ಇದನ್ನು ಕೇಳಿ ಮನದಲ್ಲಿ ಅಂದುಕೊಂಡೇ ಅಪ್ಪಾ ಸೂರ್ಯ ನಿನ್ನ ಶಾಪ ಹೇಗಿರುತ್ತೆ ಅಂತಾ ನನಗೆ ಗೊತ್ತಾಯ್ತು ಇನ್ನ ಮೇಲಿಂದಾ ಬೆಳಿಗ್ಗೆ ಬೇಗ ಏಳ್ತಿನಪ್ಪಾ, ಇ ಕನಸಿನ ತರಾ ಎಂದು ಹೀಗೆ ಮಾಡಬೇಡಪ್ಪಾ ಅಂತಾ ಬೇಡಿಕೊಂಡು, ತಾತನನ್ನು ಜೊರಾಗಿ ಅಪ್ಪಿಕೊಂಡೆ...