ಹಳೆ ಹುಡುಗಿ ಕೆಮ್ಮಿದರೆ ಪ್ರಳಯಾನೇ ಗ್ಯಾರಂಟಿ
[ ಈ ಸಣ್ಣ ಕತೆಯ ವಿಷೇಶವೆನೆಂದರೆ, ಇಲ್ಲಿ ವಿವರಿಸುವಾಗ, ವಾಕ್ಯರಚನೆಯಲ್ಲಿರುವ ಎಲ್ಲಾ ಪದಗಳು ಒಂದೆ ಅಕ್ಷರದಿಂದ ಆರಂಭವಾಗುತ್ತೆ. ಇದು ಕನ್ನಡ ಭಾಷೆಯ ಸಾಮಥ್ರ್ಯವನ್ನು ಮತ್ತು ವಿಭಿನ್ನತೆಯನ್ನು ತೋರಿಸುತ್ತದೆ. ಜೈ ಕರ್ನಾಟಕ ಮಾತೆ...]
ಮುಂಜಾನೆಯ ಮಂಜಿನ ಮುನಿಸು, ಮುಸುಕಾಗಿ ಮಿಸುಕಾಡದೆ ಮಂಡಿಸಿತ್ತು. ಮುಳ್ಳಾಗಿ ಮರಗದೆ ಮಡಿಚಿ-ಬಿಡಿಸದ ಮಾತುಗಳು ಮಂದಗಣನೆಗೆ ಮುಂದಾಗಿದ್ದವು. ಹಾಸಿಗೆಗೆ ಹೆಸರಿಡದೆ, ಹೊದಿಕೆಗೆ ಹೊತ್ತು ಹಂಗಿಸುತ್ತಿತ್ತು. ಹೆಮ್ಮರವು ಹಮ್ಮಿರದ ಹೊತ್ತುಗತ್ತಲು ಹಸುನಾಗಿರದೆ, ಹೆರಿಗೆಯ ಹಾಡಿಗೆ ಹೂಂಕರಿಸಿ, ನ್ಯಾಯದ ನಿದ್ದೆಯನ್ನು ನುಂಗಿಸುವ ನಗೆತೊರುತ್ತಿತ್ತು. ನನಗೋ ನಾಗಾಲೋಟದ ನಂಜು ನೆತ್ತಿಗೇರಿದ ನಡುಗಿಸಲಾರದ ನಿದ್ದೆ. ಮನೆ ಮಂದಿಯ ಮಧವಡಗಿಸಿದ ಮಾತು, ಮುಳ್ಳಾಗಿ ಮೌನದ ಮಂತ್ರ ಮಂದ್ರಿಸುವ, ಮುನಿಸಿನ ಮತ್ಸ್ಯಭಾವ ಮನೆಯಂಗಳದಲ್ಲಿ ಮುಗ್ಗರಿಸಿತ್ತು. ಸೂಜಿಮಲ್ಲಿಗೆಯ ಸುಗಂಧದ ಸಂಗಕ್ಕಾಗಿ ಸೌಮ್ಯತಾಭಾವ ಸಾವಕಾಶವಾಗಿ ಸಂಯೊಗವಾಗುವ ಸಮಯವದು.
"ಮತ್ತೇನ್‍ಪಾ, ನಿದ್ದೀನ ಗೆದ್ದದ್ ಆತೋ"
"ಹ:..."
"ಹಾ..."
"ಹಂ... ಎನೊ.. ನಿದ್ದಿ ಅನ್ನೂದ, ಆರಸಲಾರದ ಆರತಿ, ಗೆಲ್ಲಲಾರದ ಗೆಳತಿ, ಅದನ್ನ ಗೆಲ್ಲೂದು...."
"ಭಾರಿ ಮಾತಾಡಾಕ ಕಲತಿ ಬಿಡಪಾ, ಗೆಲ್ಲಲಾರದ ಗೆಳತಿ..., ಹಿರ್ಯಾರು ಒಂದ ಮಾತ ಹೇಳ್ಯಾರ್, ಮನುಷ್ಯಾ ಸಾಯು ಟೈಮ್‍ನ್ಯಾಗ ಸುಳ್ಳ ಹೆಳುಲ್ಲ ಅಂತ, ಹಂಗ ನಿದ್ದೀನು ಅರ್ದಾ ಸಾಯು ಬದುಕಿನ ಟೈಮ್ ಇದ್ದಾಂಗ"
"ಎನೋ.. ಬಾಯಿಗ ಬಂದಿದ್ದ ಹೇಳಿನ್ರೀ ಅಪ್ಪಾಜಿ, ಅದಕೂ ಇದಕೂ ಏನ್ ಸಂಬಂಧ ರೀ"
"ದನಗೊಳಗಿ ಕೋಡ ಬೆಳದ್ರ್ ಕತ್ತರಿಸಬಹುದು, ಆದರ ಬಾಲಾ ಬೆಳದ್ರ್ ಕತ್ತರಸಾಕ ಆಗುಲ್ಲಾ. ನಮಗು ನಿನಗ ಹುಡಗಿ ಹುಡಕಿ-ಹುಡಕಿ ಸಾಕಾಗಿ ಹೋಗೇತಿ. ಮುಗನತ್ತಿಗೂ ಹೆಸರಿಡು ಮನಶ್ಯಾ ಅದಿ ನೀ, ನಮಗು ಸಾಕಾಗಿ ಹೋಗೇತಿ"
"ಹಂಗೇನು ಇಲ್ರಿ ಅಪ್ಪಾರಿ, ಮುಂದಿನ ಸಲಾ ನಾ ಬರೋದ್ ಇಲ್ಲಾ, ನೀವ್ ಯಾರ್ನ ತಂದ ಮುಂದ ಇಟ್ರು ಕಣ್ಣ ಮುಚ್ಚಿ ಕಟಕೊತೀನಿ"
"ನಿನಗ ನಮ್ಯ ಮ್ಯಾಲ ವಿಸ್ವಾಸ ಇರ್ಲಿ, ಹೆದರಿಕಿ ಬ್ಯಾಡಾ, ಜಲ್ದಿ ಎದ್ದ, ಬಡಾನ ರಡಿ ಆಗ, ನೀ ರಾತ್ರಿ ಮಲಗಿದಾಗ ಬಡಬಡಿಸಿದಲಾ ಆಕಿ ಮನಿಗಿ ನೋಡಾಕ ಹೋಗುನು ಇವತ್ತ. ನಿನ್ನ ರೂಮೆಟಗ ಫೋನ ಮಾಡಿ ಎಲ್ಲಾ ಕೇಳಿಕೊಂಡೆನಿ, ನಾವೂ ನೋಡುನಂತ ನಿನ್ನ ಗೆಲ್ಲಲಾರದ ಗೆಳತಿನ್"
............................................................................
ನೆನಪಾಗುತ್ತಿಲ್ಲಾ ನೆನಪಿನ ನೆಗಡಿಯಲ್ಲಿ ನಡುಗಿ ನೆಲೆಗೊಂದಿರುವ ನಾಮಾಂತರಗಳು. ನರಕದ ನಾರನ್ನು ನೀರೆಂದು ನೆಂದುಕೊಂಡಂತೆ ನಡುಕಾಗುತ್ತಿದೆ ನರನಾಡಿಗಳಲ್ಲಿ. ನೆಮ್ಮದಿಯ ನಿಟ್ಟುಸಿರು ನನಸಾಗದ ನಗುವಾಗಿದೆ, ನಮರಿರುವ ನಯನವಾಗಿದೆ. ನುಂಗುಗನ್ನಡಿಯ ನಾಡಿಗೆ ನರಮಾನವನ ನುಸುಳಾಟದ ನೃತ್ಯ, ನಘ್ನವೆನುಸುವ ನಾಟಕವಾಗಿದೆ. ನೀನೇ ನಾರಾಯಣವೆನ್ನುವ ನಾಮಧೇಯ ನುಂಗುವಂತೆ ನೋಡುತ್ತಿದೆ. ಪರಾಗಸ್ಪರ್ಷವಿಲ್ಲದ ಪಾರಿವಾಳ ಪತಿವ್ರತೆಯ ಪತವಿಟ್ಟು ಪರಿದಿಯ ಪ್ರಕರಣಗಳನ್ನು ಪಲ್ಲಟಿಸಿದ ಪತಸಂಚಲನದಲ್ಲಿಯ ಪಿತೃ-ಮಾತೃರ ಪರಿಕ್ಷೆಯ ಪಣ ಪ್ರಾರಂಭವಾಗಿದೆ. ಗೆಳತಿಯ ಗುಂಗೆನಿಸಿದನಾದ ಗಧಾಯುದ್ದವಾಡುತಿದೆ.
"ಯವ್ವ, ಇವತ್ತ ಯಾರರ ಹುಡಗಿನ ನೋಡಾಕ ಹೊಂಟೇವಿ?"
"ಏನನೋಪಾ, ನಿಮ್ಮ ಅಪ್ಪಾಜಿನ ಕೇಳಕೊ, ಏನೋ ಯಾವದೊ ಹೆಸರ್ ಅಂದಾಂಗ ಆಗಿತ್ತು"
"ಹಾ!... ಯಾರ ಹೆಸರ್ ಹೇಳ್"
"ಹಾ.. ಜಲ್ದಿ ಹೇಳ್"
"ಹಂಗ್ಯಾಕ ಎಲ್ಲಾ ಚಡ್ಡ್ಯಾಗ ಮಾಡ್ಕೊವವರ್ ಗತಿ ಮಾಡಾಕತಿ, ತಡಿ ಒಂದ ನಿಮಿಷ"
ನೆನದ ನೀರಾಗಿ ನಿರಾಕಾಂತತೆಯ ನೆಲವಾಗಿ ನಲುಗಾಡಿದಳು. ನೆನಪಾಗಲಿಲ್ಲಾ, ನಿಟ್ಟುಸಿರು ಬಿಟ್ಟಳು"
"ಎಷ್ಟೋತ್ತ್ ಮಾಡತಿ ಜಲ್ದಿ ಹೇಳಬೇ"
"ನಿನಗ, ನಿಮ್ಮಪ್ಪಗ ನೀರ ಹಾಕಲ್ಲದ ಅನ್ನ ರಡಿ ಆಗಿರ್ಬೇಕ್, ನೀ ಹೋಗಿ ನಿಮ್ಮಪ್ಪನ್ನ ಕೇಳ್, ನನಗ ಅಡಗಿ ಮನ್ಯಾಗ ಬಾಳ ಕೆಲಸ ಐತಿ, ನಡಿ ಇನ್ನ"
"ಹಂಗ ಅಲ್ಲ ಬೇ.... ಇರ್ಲಿ ಬಿಡು... ಆಮ್ಯಾಲ ನೆನಪ ಆದ್ರ ಹೇಳ್"
..............................................................................
ಮುಗಿಲು ಮುಗಿಬಿದ್ದಿದೆ ಮುಂಜಾನೆ ಮುಸ್ಸಂಜೆಯನ್ನದೆ, ಮಾತುಮೌನವಾಗಿ ಮುಂಜಾನೆಯ ಮಂತ್ರಗಳನ್ನಾ ಮರೆಸಿದೆ. ಮೌನ ಮತ್ಸರದ ಮಡುವಿನಲ್ಲಿ ಮನನಾಂಗಿಯಾಗಿದೆ. ಮುನಿಸು ಮಲ ಮೂತ್ರದ ಮರುಗಣನೆಯನ್ನು ಮರೆಸುತಿದೆ. ಮತ್ತೊಂದೆಡೆ ಮರ್ಯಾದೆಯ ಮಬ್ಬು ಮತ್ತೇರುಸುತಿದೆ. ತಡೆದು ತಡೆದು ತಿಳಿಗೇಡಿಯಾಗಿ ತಾತ ತಂಗಿಯರ ತವರಿಗೆ(ರೂಮಿಗೆ) ತೆರಳಿದೆ. ಉತ್ತರಗಳು ಉತ್ತರಿಸದೆ ಉತ್ತರದಿಕ್ಕಿಗೋಡುತಿವೆ.
"ಅಜ್ಜಾ.. ಅಪ್ಪಾಜಿ ಜಲ್ದಿ ರೆಡಿ ಆಗಾಕ ಹೇಳ್ಯಾರ, ನೀವ್ ಇನ್ನೂ ರಡಿ ಆಗಿಲ್ಲಾ! ಜಲ್ದಿ ರಡಿ ಆಗರಿ ಹುಡಗಿ ನೋಡಾಕ ಹೋಗ್ಬೇಕು"
"ಯಾವಾಗ ಹೇಳಿದಾ... ನನಗೇನು ಗೊತ್ತಿಲ್ಲಾ. ಯಾವ ಹುಡಗಿ? ಎಲ್ಲಿಗ್ ಹೋಗಬೇಕು?"
ದ್ವಂದ್ವಗಳು ದಂತಕತೆಯಂತೆ ಧರೆಗುಳಿದವು, ದ್ವಂದ್ವಗಳ ದ್ವಂಸವನ್ನು ದಂಗುಬಡಿಸುವ ದುಗುಡ ದಾಸನಾಗಿದ್ದ. ತಾತನ ತತ್ರಾಣಿಯು(ನೀರು ಹಾಕುವ ಪಾತ್ರೆ) ತೂಗುಯ್ಯಾಲೆಂದಮೇಲೆ(ಖಾಲಿ ಆದಾಗ ಅಲ್ಲಾಡಿಸಿ ನೋಡಿದ ಹಾಗೆ), ತಂಗಿಯೇ ತ್ರಾಣವೆಂದರಿತು,
"ತಕರಾರು ತಂಗೆವ್ವಾ, ನಿನಗ ಗೊತ್ತರಿಬೇಕಲ್ಲ್, ತಗಣಿಯಾಂಗ ಒಳಗ ಹೊಕ್ಕ ಎಲ್ಲಾ ಜಗ್ಗಾವ್ರ ನೀವ್, ನೀನ್ ಅಜ್ಜಾಗ ಹೇಳಲಾ"
"ನೀ ಸುಮ್ನ ಇರ್, ಬೆಳಗ್ಗಿ-ಬೆಳಗ್ಗಿ ಸಿಟ್ಟ ತರಸಬ್ಯಾಡ, ನಾ ತಗಣ್ಯಾ,.. ತಡಿ ನಿಂಗ ಮಾಡ್ತೇನಿ"
"ಏ.. ಹೋಳ್ ಉಪ್ಪಿನಕಾಯಿ, ಸುಮ್ನ ಇರ್ವಾ, ಬೆಳಗಾದ ಕುಡಲೆನ ಶ್ಯಾಂಡಗಿ ಇಡಾಕ ಹೋಗ್ಬ್ಯಾಡಾ"
"ನಿನಗ ಗೊತ್ತಿರೋದ ಹೇಳಲಾ ಅಜ್ಜಾಗು ಅಟ್, ಮತ್ತ್ ಅವಾ ಜಲ್ದಿ ರಡಿ ಆಗಬೇಕೊ ಬ್ಯಾಡೋ?"
"ನನಗ ಏನು ಗೊತ್ತಿಲ್ಲಾ... ಗೊತ್ತಿದ್ರು ಹೇಳುಲ್ಲಾ..."
"ಹೇಳು ಪುಟ್ಟಿ, ಶ್ಯಾನ್ಯಾ ಅಲ್ಲಾ ನೀ, ಇವತ್ತ ಐಸಕ್ರೀಮ್ ತಂದ ಕೊಡತಿನಿ"
"ನಾ ಹೇಳುಲ್ಲ್, ಐಸಕ್ರೀಮ್ ನಾ ಅಪ್ಪಾಜಿ ಕಡೆಯಿಂದ ತರಸ್ಕೊತೀನಿ, ನಿನಗ ಗೊತ್ತೈತ್ ಲಾ, ನೀನ ಹೇಳು"
ದು:ಖದಲ್ಲಿ ಧರೆಗಿಳಿದ ದುಂಬಿಯ ದ್ವಂದ್ವನಾದದಂತೆ, ದಂತಕತೆಯಲ್ಲಿ ಧರ್ಮಪತ್ನಿಯ ಧರಿಸುವ ದುಸ್ವಪ್ನದಂತೆ ದುಸ್ಸೆಂದು ದೂರ್ನಾತವಾದೆ.
"ಆಯ್ತು ಬಿಡು, ಅಜ್ಜಾ ನೀವ ಅಪ್ಪಾಜಿನ ಕೇಳ್ರೀ, ನಾ ನಡಿತೇನ್ ಇನ್ನ್"
"ಅಣ್ಣಾ.. ನಾ ಹೇಳಲಿ ಹೆಸರ"
ಜೀವ ಜನನವಾಗಿ, ಜಗಳವಿಲ್ಲದ ಜಾಗ್ರತವಾಗಿ, ಜಲದಾಳದಲಿ ಜುನು-ಜುನುಪಿಸುತ ಜರುಗಿದಂತಾಯಿತು.
"ಹಾ.... ಹೇಳ್"
"ಹೆಸರಾ... ಹೆಸರಾ... ಹೆಸರಕಾಯಿ... ಹಿ ಹಿ ಹಿ..."
..............................................................................
ಹಪ್ಪಳ ಹೊತ್ತಿ ಹುರಕಡ್ಲಿಯಾಯಿತು, ಹೂಡದ ಹಡಗು ಹುಮ್ಮಸ್ಸಿಲ್ಲದೆ ಹಗುರಾಗಿ ಹೋರಾಡದೆ ಹೋಳಾಯಿತು. ನಾನು ನಾನೆಂಬ ನಾಂದಿ ನಿದ್ದೆಗೆಟ್ಟು ನೆಲಕ್ಕುರುಳಿತು. ನಗುವು ನಗೆಮಾತಾಗಿ ನೀರುಂಡಿತು. ನೆತ್ತರದ ನಡುಕ ನುಡಿಗಳಲ್ಲಿ ನೂಕಲಾರದೆ ನಡುಗುತಾ ನೆಂಟರಂತಾಯಿತು. ನಡೆದಾಡಿದೆ ನೆಮ್ಮದಿಯಿಲ್ಲದೆ. ಕಥೆಯ ಕೊನೆಹಂತದ ಕುರುಹಿಗಾಗಿ ಕುಗಾಡಿದೆ, ಕೊಸರಾಡಿದೆ. ಕ್ರಾಂತಿಯ ಕಂತುಗಳಿಗೆ ಕತ್ತಿನ ಕಿಮ್ಮತ್ತು ಕೊಟ್ಟು ಕೊನೆಯಾಗಿಸುವ ಕುರುಹಿಗಾಗಿ ಕ್ರಾಂತಿಕಾರಿಯಾದೆ.
"ಅಪ್ಪಾಜಿ, ಬೆಳಿಗ್ಗೆ-ಬೆಳಿಗ್ಗೆ ಮಷ್ಕಿರಿ ಮಾಡಾಕ ಹೋಗಬ್ಯಾಡ್ರಿ. ನಾನ, ನೀವ ಮತ್ತ ಮನ್ಯಾನ್ನವರ ಹೇಳಿದ್ದ ಹುಡಗೀನ ಮದವಿ ಆಗ್ತೇನಿ. ನಾನು ಯಾರ್ನು ಲವ್ ಮಾಡಿಲ್ಲಾ. ಯಾರ ಹೆಸರ್ನು ನಿದ್ದಿಗನ್ನಾಗ ಬಡಬಡಿಸಿಲ್ಲಾ. ಸುಮ್ನ್ ಎದ್ದ ಕೂಡಲೆ ಕಿರಿ-ಕಿರಿ ಕೊಡಬ್ಯಾಡರಿ"
"ನಾ ಯಾಕ ಕಿರಿ-ಕಿರಿ ಕೊಡಲಿ ನಿಂಗ್. ನಿನಗ ಒಳ್ಳೆದ ಆಗಲಿ ಅಂತ ಹಿಂಗ ಮಾಡಾಕತೇನಿ, ನಮಗ ತ್ರಾಸ್(ಕಷ್ಟ) ಕೊಡುದು ಆಕ್ಕೇತಿ ಅಂತಾ, ನಿ ಒಳಗ ಒಳಗ ಒದ್ದಾಡುದ ಗೊತ್ತಾಗುಲ್ಲ ಅಂತ ತೀಳದಿ? ನಿನ್ನ ಅಕ್ಕ ಲವ-ಗಿವ್ವ ಅಂತ ನಾವ ಬ್ಯಾಡ ಅಂದ್ರು ಹೋದಳು. ಅದರಿಂದ ಹೊರಗ ಬರಬೇಕಂದ್ರ ನಮಗು ಟೈಮ್ ಹಿಡಿತಿ. ನಮ್ಮ ಕಷ್ಟಾ ನೀನು ನೋಡಿ. ನಮ್ಮ ಕಷ್ಟ ನಮಗ್ ಇರ್ಲಿ, ನೀವ್ ಎಲ್ಲಾರು ಅರಾಮ ಇದ್ರ, ಅದು ನೀರ ಹರದಾಂಗ ಹರದ ಹೊಕ್ಕೇತಿ. ನಿದ್ದಿಗನ್ನಾಗ ಬಡಬಡಿಸಿದ್ದ ಆಗೇತಿ, ಈಗ್ ಹೇಳಬಿಡ ಇದ್ದಿದ್ದನ್ನ"
"ಹಾ ಅಪ್ಪಾಜಿ ನೀವ ಹೇಳುದ್ ಖರೇ ಐತ್ರೀ. ನನಗ ಗೊತ್ತ ಇಲ್ಲದಾಂಗ ಎಲ್ಲಾ ಆಗಿ ಹೋತಿ, ಆದರ ನನಗ ಆಕಿಕಿಂತ ನೀವ ಹೆಚ್ಚಿಗಿ ಅನಿಸಿದ್ರಿ, ಅಕ್ಕಂದ ಬ್ಯಾರೆ ಹಿಂಗ ಆಗಿತ್ತಲಾ, ಅದಕ ನಿಮ್ಮ ಮುಂದ ಹೇಳಾಕ ದೈರ್ಯೆ ಸಾಲಲಿಲ್ಲಾ"
"ಲೇ ಎಲ್ಲಿ ಅದಿ, ಬಾ ಇಲ್ಲಿ... ನಾ ಹೇಳಲಿಲ್ಲಾ ನಿನಗ. ನಿನ್ನ ಮಗಾ ಯಾರ್ನೊ ಲವ್ ಮಾಡಾಕತಾನಂತ. ಏನ್ ಮಾಡುದ ನಮ್ಮ ಕರ್ಮ ಅನುಭವಿಸಬೇಕ್... ಯಾವ ಜ್ಯಾತ್ಯಾಕ ಅದಾಳೊ ಏನೋ... ಎಲ್ಯಾಕಿ ಅದಾಳೊ ಏನೋ.... ನಾಕ ಮಂದ್ಯಾಗ ಬಾಳುದ ಕಠಿನ ಐತಿ"
"ಒಬ್ಬ ಮಗಳ್ನ ಕಳಕೊಂಡಿದ್ದ ಆಗೇತಿ, ಇರಾವ ಒಬ್ಬ ಗಂಡ ಮಗಾ. ಇರ್ಲಿ ಬಿಡರಿ. ನಮಗರ ಯಾರದಾರ ಇನ್ನ. ನಾವ ನೊಡಿದ್ದ ಹುಡಗಿಯಿಂಬಾಲಿ ಅವಾ ಮನಸಿಲ್ಲದ ಸಾಯು ತನಾ ಕೊರಗುದಕಿಂತಾ, ಅವಾ ಈಷ್ಟಾ ಪಟ್ಟಾಕಿ ಇಂಬಾಲಿ ಕೊಟ್ಟ ಮದುವಿ ಮಾಡೂನು, ಅರಾಮರ ಇರ್ತೇತಿ ನನ್ನ ಮಗಾ"
"ನೀವ ಇಷ್ಟೊತ್ತೇಲ್ಲಾ ನಾಟಕಾ ಮಾಡಿದ್ರೀ? ಬಡಬಡಿಸಿದ್ದೆಲ್ಲಾ ಸುಳ್ಳಾ?"
ಆಶ್ಚರ್ಯವು ಅನಾಯಾಸವಾಗಿ ಆಸರೆಗೊಂಡು ಅಧಿಕಾರಿಶಾಹಿಯಾಯಿತು.
"ನಿಮ್ಮ ಅಪ್ಪಾಜೀನ ಕೇಳಪಾ, ಅವರ ಬರೆದ ಕೊಟ್ಟ ಸಾಲನಾ ಹಾಡು ಶಕ್ತಿ, ಅಷ್ಟ್ ನನಗ ಐತಿ, ಬರ್ಯು ಶಕ್ತಿ ನನಗ ಇಲ್ಲಾ"
"ಅಪ್ಪಾಜಿ ನನಗ ಅಂತು ದಿಕ್ಕ ತಿಳಿಲಾಂಗ ಆಗೇತ್ರೀ. ಆವಾಗ ಯಾರ ಹೆಸರ ತಗೊಂಡೇನೋ ಅಂತಾ, ಈಗಾ ಯಾರ ಹೆಸರ ಹೇಳಲಿ ಅಂತಾ"
"ಹಂಗಂದ್ರ!!!"
"ಇಬ್ರರಾಗ(ಎರಡು) ಯಾರ ಹೇಸರ ಹೇಳಲಿ ಅಂತ್"
"ಹಾ!!!!"
"ಹಾ!!!!"
................................ ಮುಕ್ತಾಯ ...................................................